ಡಿ.ಕೆ.ಶಿವಕುಮಾರ್ ಅವರು ಸಿಎಂ ಆದ ಮೇಲೆ ಕರ್ನಾಟಕಕ್ಕೆ ಯಾವುದೇ ಒಳ್ಳೆದಾಗಿಲ್ಲ. ಡ್ಯಾಂ ಖಾಲಿ, ಖಜಾನೆ ಖಾಲಿ, ಆದರೆ ಕಾಂಗ್ರೆಸ್ ನಾಯಕರು ದೆಹಲಿಯಲ್ಲಿ ಮಾತ್ರ ಜಾಲಿ ಮಾಡುತ್ತಿದ್ದಾರೆ” ಎಂದು ವಿಪಕ್ಷ ನಾಯಕ ಆರ್. ಅಶೋಕ್ ತೀವ್ರವಾಗಿ ವ್ಯಂಗ್ಯವಾಡಿದ್ದಾರೆ. ಬಳ್ಳಾರಿಯಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಭೀಕರ ಬರ ಆವರಿಸಿದ್ದರೂ ಸರ್ಕಾರ ರೈತರ ನೆರವಿಗೆ ಬಾರದೆ ಕಾಲಹರಣ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಬಳ್ಳಾರಿ ಜಿಲ್ಲೆಯಲ್ಲಿ ಭೀಕರ ಬರ ಪರಿಸ್ಥಿತಿ ತಲೆದೋರಿದ್ದು, ಬಿತ್ತನೆಯಾಗದೇ ಜಮೀನುಗಳು ಖಾಲಿಯಾಗಿವೆ. ಪ್ರಸ್ತುತ ಕೇವಲ ಶೇ. 38ರಷ್ಟು ಮಾತ್ರ ಬಿತ್ತನೆಯಾಗಿದ್ದು, ಬೆಳೆಗಳ ಬೆಳವಣಿಗೆ ಕುಂಠಿತಗೊಂಡಿದೆ. ಬಳ್ಳಾರಿ ಗ್ರಾಮಂತರ ಭಾಗದ ರೈತರ ಹೊಲಗಳಿಗೆ ಭೇಟಿ ನೀಡಿ ಪರಿಶೀಲಿಸಿದ ವಿಪಕ್ಷ ನಾಯಕ ಆರ್. ಅಶೋಕ್, ಕಾಂಗ್ರೆಸ್ ಸರ್ಕಾರದ ಬಳಿ ಹಣವಿಲ್ಲದೇ ಖಜಾನೆ ಖಾಲಿಯಾಗಿದೆ. ಆದಾಯ ತರುವ ಇಲಾಖೆಗಳಿಗೆ ಮಾತ್ರ ಮಂತ್ರಿಗಳನ್ನು ನೇಮಕ ಮಾಡಿಕೊಂಡು ಕಲೆಕ್ಷನ್ನಲ್ಲಿ ತೊಡಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಬರದಿಂದ ಸಂಕಷ್ಟದಲ್ಲಿರುವ ರೈತರ ನೆರವಿಗೆ ತಕ್ಷಣವೇ ಬರ ಪರಿಹಾರ ಘೋಷಿಸಬೇಕು. ಬ್ಯಾಂಕುಗಳಿಂದ ರೈತರಿಗೆ ನೋಟೀಸ್ ಬರುವುದನ್ನು ತಡೆದು, ₹1 ಲಕ್ಷದವರೆಗಿನ ಕೃಷಿ ಸಾಲವನ್ನು ತಕ್ಷಣವೇ ಮನ್ನಾ ಮಾಡಬೇಕು. ಜತೆಗೆ ಕುಡಿಯುವ ನೀರಿಗಾಗಿ ಪ್ರತಿ ತಾಲೂಕಿಗೆ ₹50 ಕೋಟಿ ಬಿಡುಗಡೆ ಮಾಡಬೇಕು ಹಾಗೂ ಎಕರೆಗೆ ₹50,000 ಪರಿಹಾರ ನೀಡಬೇಕು. ಮುಂಬರುವ ವಿಧಾನಸಭೆ ಕಲಾಪದೊಳಗೆ ಸರ್ಕಾರ ಬರ ಘೋಷಣೆ ಮಾಡದಿದ್ದರೆ ಸದನ ನಡೆಯಲು ಬಿಡುವುದಿಲ್ಲ ಎಂದು ಆರ್. ಅಶೋಕ್ ಎಚ್ಚರಿಕೆ ನೀಡಿದರು.
ಕಾವೇರಿ ಹಾಗೂ ತುಂಗಭದ್ರಾ ನೀರು ನಿರ್ವಹಣೆಯಲ್ಲೂ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಕಾವೇರಿ ನೀರು ಬಿಡಬಾರದು ಹಾಗೂ ಆಂಧ್ರ-ತೆಲಂಗಾಣಕ್ಕೆ ನೀರು ಹರಿಸಿ ತುಂಗಭದ್ರಾ ಡ್ಯಾಂ ಖಾಲಿ ಮಾಡುವುದನ್ನು ನಿಲ್ಲಿಸಬೇಕು. ತುಂಗಭದ್ರಾ ನೀರಿಗಾಗಿ ಅಂಜನಾದ್ರಿಯಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದ ಅವರು, ಮೋದಿ ಸರ್ಕಾರ ಕಾಂಗ್ರೆಸ್ಗಿಂತ ಹೆಚ್ಚಿನ ಅನುದಾನ ನೀಡಿದ್ದರೂ ರಾಜ್ಯ ಸರ್ಕಾರ ಹಣವಿಲ್ಲ ಎಂದು ನೆಪ ಹೇಳುತ್ತಿದೆ ಎಂದು ಕಿಡಿಕಾರಿದರು.
