ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಕಾರ್ಯವನ್ನು ಸಮರ್ಪಕವಾಗಿ ನಿಭಾಯಿಸುತ್ತಿರುವ ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯವನ್ನು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮುಕ್ತವಾಗಿ ಶ್ಲಾಘಿಸಿದರು.

ಬುಧವಾರ ಸಂಜೆ ಪಾಲಿಕೆ ಚುನಾವಣಾ ಶಾಖೆಗೆ ಆಕಸ್ಮಿಕ ಭೇಟಿ ನೀಡಿದ್ದ ಅವರು, ಪಾಲಿಕೆ ವ್ಯಾಪ್ತಿಯ ಉತ್ತರ, ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಎಸ್ಐಆರ್ ಕಾರ್ಯ ಹಾಗೂ ಗಣಕೀಕರಣದ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಎಸ್ಐಆರ್ ಯಶಸ್ವಿಗಾಗಿ
ವಿಶ್ರಾಂತಿ ರಹಿತವಾಗಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಸಿಬ್ಬಂದಿಯ ಕಾರ್ಯವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಮಾತನಾಡುವ ತೊಂದರೆ ಇರುವ ಸಿಬ್ಬಂದಿ ವಿಶಾಲ ಮಾವಿನಕಟ್ಟಿ ಅವರ ಅಚ್ಚು ಕಟ್ಟು ಕೆಲಸಕ್ಕಾಗಿ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದರು.
ಆಯುಕ್ತರು ಹಾಗೂ ಮೇಲಾಧಿಕಾರಿಗಳ ಮಾರ್ಗದರ್ಶನ ಹಾಗೂ ಸಂಯೋಜನೆಯಿಂದ ಕಾರ್ಯದಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗಿದ್ದು, ಬೇರೆ ಸಿಬ್ಬಂದಿಗೂ ಇದು ಮಾದರಿಯಾಗಿದೆ ಎಂದು ಹೇಳಿದರು. ನಂತರ ಜಿಲ್ಲಾಧಿಕಾರಿಗಳು ಪಾಲಿಕೆ ಆವರಣದಲ್ಲಿರುವ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಮೂರ್ತಿ ವೀಕ್ಷಿಸಿ ಉದ್ಯಾನದ ಉತ್ತಮ ನಿರ್ವಹಣೆಗೆ ಮೆಚ್ಚುಗೆ ಸೂಚಿಸಿದರು.
ಪಾಲಿಕೆಯ ಕಂದಾಯ ವಿಭಾಗದ ಉಪ ಆಯುಕ್ತ, ದಕ್ಷಿಣ ವಿಧಾನಸಭಾ ಕ್ಷೇತ್ರದ ಸ. ಮತದಾರರ ನೋಂದಣಾಧಿಕಾರಿ ಡಾ. ಸಿದ್ದು ಹುಲ್ಲೋಳಿ ಅವರು, ಜಿಲ್ಲಾಧಿಕಾರಿಗಳಿಗೆ ಎಸ್ಐಆರ್ ಪ್ರಗತಿಯ ಬಗ್ಗೆ ವಿವರಣೆ ನೀಡಿದರು.
ಈ ಸಂದರ್ಭದಲ್ಲಿ ಅಧಿಕಾರಿಗಳು, ಮೇಲ್ವಿಚಾರಕರು ಸೇರಿದಂತೆ ಎಸ್ಐರ್ ಹಾಗೂ ಪಾಲಿಕೆಯ ಸಿಬ್ಬಂದಿ ಉಪಸ್ಥಿತರಿದ್ದರು.
