ಧಾರವಾಡದ ಕರ್ನಾಟಕ ಕಾಲೇಜಿನ ವಿಜ್ಞಾನ ವಿಭಾಗದ ಪ್ರವೇಶ ಶುಲ್ಕ ಏರಿಕೆ ಖಂಡಿಸಿ ಹಾಗೂ ಶುಲ್ಕ ಇಳಿಕೆಗೆ ಆಗ್ರಹಿಸಿ ಧಾರವಾಡದ ಕವಿವಿಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ವಿಶ್ವ ವಿದ್ಯಾಯಲಯದ ಮುಖ್ಯ ವೃತದಲ್ಲಿ AIDSO ಸಂಘಟನೆ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ, ಕವಿವಿ ವಿರುದ್ಧ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ಹೊರಹಾಕಿದರು. ಈ ವೇಳೆ ಮಾತನಾಡಿದ್ ಎಐಡಿಎಸ್ಓ ರಾಜ್ಯ ಸೆಕ್ರೆಟರಿಯಟ್ ಸದಸ್ಯರಾದ ವಿನಯ್ ಚಂದ್ರ, “ರಾಜ್ಯಾದ್ಯಂತ ಇಂದು ಸರ್ಕಾರವು ಶಿಕ್ಷಣ ಸಂಸ್ಥೆಗಳನ್ನು ಸ್ವಸಹಾಯ ಸಂಸ್ಥೆಗಳನ್ನಾಗಿ ಮಾಡುವ ನಿಟ್ಟಿನಲ್ಲಿ, ಸರ್ಕಾರಿ ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರಿ ವಿಶ್ವವಿದ್ಯಾಲಯಗಳಿಗೆ ಬರುವ ಅನುದಾನವನ್ನು ಕಡಿಮೆ ಮಾಡುತ್ತಾ ಅದರ ಹೊರೆಯನ್ನು ವಿದ್ಯಾರ್ಥಿಗಳ ಮೇಲೆ ಹೇರುತ್ತಾ ಬರುತ್ತಿದೆ. ಈ ಮೂಲಕ ಶಿಕ್ಷಣವನ್ನು ಖಾಸಗೀಕರಣಗೊಳಿಸುವ ನಿಟ್ಟಿನಲ್ಲಿ ನೀತಿಗಳನ್ನು ರೂಪಿಸುತ್ತಿರುವುದನ್ನು ತೀವ್ರವಾಗಿ ಖಂಡಿಸಿದರು. ಇದೇ ಹಿನ್ನಲೆಯಲ್ಲಿ ರಾಜ್ಯ ಸರ್ಕಾರವು ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ಜಾರಿಗೆ ತರುವುದರ ಮೂಲಕ, ಸರ್ಕಾರವು ಸಂಪೂರ್ಣ ಹಣಕಾಸಿನ ಹೊರೆಯಿಂದ ನುಣಚಿಕೊಳ್ಳುವುದಲ್ಲದೆ, ಶಿಕ್ಷಣವನ್ನು ವ್ಯಾಪಾರೀಕರಣಗೊಳಿಸಲು ಮುಂದಾಗಿದೆ. ಈ ಮೂಲಕ ಬಡ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ಹೊರಗುಳಿಸುವ ಹುನ್ನಾರ ನಡೆಸಿದೆ.
ಸಾರ್ವತ್ರಿಕ ಶಿಕ್ಷಣದ ಕನಸನ್ನು ಹೊತ್ತು ಹೋರಾಡಿದ ಸಾವಿತ್ರಿಬಾಯಿ, ಜ್ಯೋತಿಬಾಪುಲೆ, ಭಗತ್ ಸಿಂಗ್ ನೇತಾಜಿಯಂತಹ ಮಹಾನ್ ವ್ಯಕ್ತಿಗಳ ಆಶಯವನ್ನು ಧಿಕ್ಕರಿಸಿ ಶಿಕ್ಷಣವನ್ನು ಬಡವರಿಂದ ಕಸಿದುಕೊಳ್ಳಲು ಮುಂದಾಗಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಈ ಕೂಡಲೇ ವಿದ್ಯಾರ್ಥಿಗಳ ಪ್ರವೇಶಾತಿ ಶುಲ್ಕವನ್ನು ಕಡಿತಗೊಳಿಸಲು ಆಗ್ರಹಿಸಿದರು. ಜತೆಗೆ ಈ ವರ್ಷದಿಂದ ಕೆಸಿಡಿ ವಿಜ್ಞಾನ ಮಹಾವಿದ್ಯಾಲಯದ ಬಿ ಎಸ್ ಸಿ ವಿದ್ಯಾರ್ಥಿಗಳಿಗೆ 6,413 ರೂ ಹಾಗೂ ಬಿಸಿಎ ವಿದ್ಯಾರ್ಥಿಗಳಿಗೆ 10,522 ರೂ ಪ್ರವೇಶಾತಿ ಶುಲ್ಕ ಹೆಚ್ಚಳವಾಗಿದ್ದು ಇದರಿಂದಾಗಿ ಹಲವಾರು ವಿದ್ಯಾರ್ಥಿಗಳು ಇಲ್ಲಿಯವರೆಗೂ ಕಾಲೇಜು ಶುಲ್ಕ ಪಾವತಿಸಲಾಗಿಲ್ಲ. ಈ ಕಾಲೇಜಿಗೆ ಬರುವ ಬಹುತೇಕ ವಿದ್ಯಾರ್ಥಿಗಳ ಕುಟುಂಬಗಳು ವ್ಯವಸಾಯದ ಮೇಲೆ ಅವಲಂಬಿತರಾಗಿದ್ದು, ಈಗಾಗಲೇ ರಾಜ್ಯಾದ್ಯಂತ ಬರಗಾಲದ ಪರಿಸ್ಥಿತಿ ಎದುರಾಗಿದ್ದು, ಕುಟುಂಬ ನಿರ್ವಹಣೆಯು ಕಷ್ಟವಾಗಿರುವಾಗ, ಈ ಶುಲ್ಕ ಏರಿಕೆಯು ವಿದ್ಯಾರ್ಥಿಗಳಿಗೆ ದೊಡ್ಡ ಪೆಟ್ಟನ್ನೆ ನೀಡಿದೆ. ಈ ಹಿನ್ನಲೆಯಲ್ಲಿ ಕೂಡಲೇ ಪ್ರವೇಶಾತಿ ಶುಲ್ಕ ಏರಿಕೆಯನ್ನು ಹಿಂಪಡೆಯಬೇಕು ಹಾಗೂ ಈಗಾಗಲೇ ಶುಲ್ಕ ಏರಿಕೆಯ ಮೊತ್ತವನ್ನು ಪಾವತಿಸಿರುವ ವಿದ್ಯಾರ್ಥಿಗಳ ಶುಲ್ಕವನ್ನು ಮರುಪಾವತಿಸಬೇಕು ಎಂದು ಈ ಮೂಲಕ ಒತ್ತಾಯಿಸಿದರು.
