ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಗೋಕಾಕ ಹಾಗೂ ಶಿಂಗಳಾಪುರ ಸಂಪರ್ಕಿಸುವ ಬ್ರಿಡ್ಜ್ ಕಂ ಬ್ಯಾರೇಜ್ ಸಂಪೂರ್ಣ ಜಲಾವೃತಗೊಂಡಿದೆ. ಇದರಿಂದಾಗಿ ಅಕ್ಕಪಕ್ಕದ ಗ್ರಾಮಗಳ ನಡುವಿನ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಆತಂಕದ ನಡುವೆಯೂ ಜನರು ಮುಳುಗಿದ ಸೇತುವೆ ಮೇಲೆಯೇ ಸಾಹಸದಿಂದ ಸಂಚರಿಸುತ್ತಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ತಾಲೂಕಾಡಳಿತ ನೀರಿಗೆ ಇಳಿಯದಂತೆ ಜನರಿಗೆ ಖಡಕ್ ಸೂಚನೆ ನೀಡಿದೆ.


ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಗೋಕಾಕ ತಾಲೂಕಿನ ಶಿಂಗಳಾಪುರ ಬ್ರಿಡ್ಜ್ ಕಂ ಬ್ಯಾರೇಜ್ ನೀರುಪಾಲಾಗಿದೆ. ಬ್ಯಾರೇಜ್ ಮುಳುಗಡೆಯಾದ ಕಾರಣ ಸುತ್ತಮುತ್ತಲಿನ ಹಲವು ಹಳ್ಳಿಗಳ ಸಂಪರ್ಕ ಕಡಿತಗೊಂಡಿದ್ದು, ಗ್ರಾಮೀಣ ಭಾಗದ ಸಾರಿಗೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ನೀರಿನ ಮಟ್ಟ ಏರಿಕೆಯಾಗುತ್ತಿದ್ದರೂ ಸಹ ಸಾರ್ವಜನಿಕರು ಹಾಗೂ ವಾಹನ ಸವಾರರು ಜೀವದ ಹದನವಿಲ್ಲದೆ ಮುಳುಗಿರುವ ಸೇತುವೆಯ ಮೇಲೆಯೇ ಅಪಾಯಕಾರಿಯಾಗಿ ಓಡಾಡುತ್ತಿದ್ದಾರೆ. ಈ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿರುವ ಗೋಕಾಕ ತಾಲೂಕಾಡಳಿತ ಮುನ್ನೆಚ್ಚರಿಕಾ ಕ್ರಮಗಳನ್ನು ಘೋಷಿಸಿದ್ದು, ಯಾವುದೇ ಕಾರಣಕ್ಕೂ ಸಾರ್ವಜನಿಕರು ನದಿ ನೀರಿಗೆ ಇಳಿಯಬಾರದು ಮತ್ತು ಅಪಾಯಕಾರಿ ಸಾಹಸಗಳನ್ನು ಮಾಡಬಾರದು ಎಂದು ಎಚ್ಚರಿಕೆ ನೀಡಿದೆ.
