ಬಳ್ಳಾರಿಯಲ್ಲಿ ಮಾನವೀಯತೆ ಹಾಗೂ ಪ್ರಾಮಾಣಿಕತೆಗೆ ಸಾಕ್ಷಿಯಾಗುವಂತಹ ಅಪರೂಪದ ಘಟನೆಯೊಂದು ನಡೆದಿದೆ. ಬೆಳಗಿನ ಜಾವ ವಾಕಿಂಗ್ ಮಾಡುವಾಗ ರಸ್ತೆಯಲ್ಲಿ ಸಿಕ್ಕ ಸುಮಾರು 4 ತೊಲೆ (32 ಗ್ರಾಂ) ತೂಕದ ಚಿನ್ನದ ತಾಳಿ ಸರವನ್ನು ಮೂಲ ಮಾಲೀಕರಿಗೆ ತಲುಪಿಸುವ ಮೂಲಕ ವೃದ್ಧೆ ರುಕ್ಮಿಣಮ್ಮ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಬಳ್ಳಾರಿಯ ಡಾಲರ್ಸ್ ಕಾಲೋನಿಯ ಬಳಿ ರುಕ್ಮಿಣಮ್ಮ ಅವರು ಎಂದಿನಂತೆ ಬೆಳಗಿನ ವಾಕಿಂಗ್ ಹೋಗಿದ್ದಾಗ ರಸ್ತೆಯಲ್ಲಿ ಚಿನ್ನಾಭರಣವಿದ್ದ ಚೀಲವೊಂದು ಸಿಕ್ಕಿತ್ತು. ಅದನ್ನು ಮನೆಗೆ ತಂದು ಬ್ಯಾಂಕ್ ಉದ್ಯೋಗಿಯಾಗಿರುವ ತಮ್ಮ ಮಗ ಮಂಜುನಾಥ್ ಅವರಿಗೆ ತಿಳಿಸಿದ್ದಾರೆ. ಚೀಲದ ಮೇಲಿದ್ದ ಬ್ಯಾಂಕ್ ಒತ್ತೆಯ ನಂಬರ್ ಹಾಗೂ ಮಾಹಿತಿಯ ಆಧಾರದ ಮೇಲೆ, ಬ್ಯಾಂಕ್ ಮ್ಯಾನೇಜರ್ ಸಹಕಾರದೊಂದಿಗೆ ಮೂಲ ಮಾಲೀಕರಾದ ಕುರ್ಚೇಡು ಗ್ರಾಮದ ವಸಂತ್ ಎಚ್. ಅವರನ್ನು ಪತ್ತೆ ಹಚ್ಚಲಾಗಿದೆ. ವಸಂತ್ ಅವರು ತಮ್ಮ ಪತ್ನಿಯ ರಿಪೇರಿಗೆ ತಂದಿದ್ದ 32 ಗ್ರಾಂ ಚಿನ್ನದ ಸರವನ್ನು ಜೇಬಿನಿಂದ ಕಳೆದುಕೊಂಡಿದ್ದರು.
ಆರಂಭದಲ್ಲಿ ಕರೆ ಮಾಡಿ ವಿಷಯ ತಿಳಿಸಿದಾಗ ಆನ್‌ಲೈನ್ ವಂಚಕರಿರಬಹುದು ಎಂದು ಅನುಮಾನಗೊಂಡು ವಸಂತ್ ನಿರ್ಲಕ್ಷಿಸಿದ್ದರು. ಆದರೆ, ನಂತರ ರುಕ್ಮಿಣಮ್ಮ ಅವರ ಕುಟುಂಬದವರು ಮರುಕರೆ ಮಾಡಿ ಖಚಿತಪಡಿಸಿದಾಗ ವಸಂತ್ ಅವರು ತಮ್ಮ ಸಂಬಂಧಿ ಮಹೇಶ್ ಅವರೊಂದಿಗೆ ಬಂದು ಆಭರಣಗಳನ್ನು ಸುರಕ್ಷಿತವಾಗಿ ಪಡೆದುಕೊಂಡಿದ್ದಾರೆ. ಇಂದಿನ ಕಾಲದಲ್ಲೂ ಇಷ್ಟೊಂದು ಮೌಲ್ಯದ ಬಂಗಾರವನ್ನು ಮರಳಿ ನೀಡಿದ ರುಕ್ಮಿಣಮ್ಮ ಅವರ ಕುಟುಂಬದ ಪ್ರಾಮಾಣಿಕತೆ ಮತ್ತು ಸಾಮಾಜಿಕ ಜವಾಬ್ದಾರಿಗೆ ವಸಂತ್ ಹೃತ್ಪೂರ್ವಕ ಧನ್ಯವಾದ ಅರ್ಪಿಸಿದ್ದಾರೆ.
