ಬೆಳಗಾವಿಯ ಅನ್ನಪೂರ್ಣವಾಡಿಯಲ್ಲಿ ಬೀದಿ ನಾಯಿಗಳ ಉಪಟಳ ಹೆಚ್ಚಾಗಿದ್ದು, ಶಾಲೆಗೆ ತೆರಳುವ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಲ್ಲಿ ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಶಾಲಾ ಮಕ್ಕಳಿಗೆ ಸೂಕ್ತ ಸುರಕ್ಷತೆ ಒದಗಿಸುವಂತೆ ಕೋರಿ ಆಧಾರ್ ಪಬ್ಲಿಕ್ ಸ್ಕೂಲಿನ ನಿರ್ದೇಶಕರು ಹಾಗೂ ಪ್ರಾಂಶುಪಾಲರಾದ ಮಿಲೀಂದ್ ವೈಜನಾಥ್ ಬಾಚೀಕರ ಅವರು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಅನ್ನಪೂರ್ಣವಾಡಿ ಪ್ರದೇಶದಲ್ಲಿ ಇತ್ತೀಚೆಗೆ ಬೀದಿ ನಾಯಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು, ಸಾರ್ವಜನಿಕರು ಹಾಗೂ ಶಾಲಾ ಆಡಳಿತ ಮಂಡಳಿ ತೀವ್ರ ತೊಂದರೆ ಎದುರಿಸುವಂತಾಗಿದೆ. ಈ ಕುರಿತು ಬೆಳಗಾವಿ ಜಿಲ್ಲಾಧಿಕಾರಿಗಳು ಹಾಗೂ ಅಪರ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದ ಆಧಾರ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಮಿಲೀಂದ್ ವೈಜನಾಥ್ ಬಾಚೀಕರ ಅವರು, ಶಾಲೆಗೆ ಆಗಮಿಸುವ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರ ವಾಹನಗಳನ್ನು ಬೀದಿ ನಾಯಿಗಳು ಬೆನ್ನಟ್ಟಿಕೊಂಡು ಬರುತ್ತಿದ್ದು, ದೊಡ್ಡ ಪ್ರಮಾಣದ ಅನಾಹುತ ಸಂಭವಿಸುವ ಭೀತಿ ಎದುರಾಗಿದೆ ಎಂದು ಗಮನಕ್ಕೆ ತಂದಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ತಕ್ಷಣವೇ ಸೂಚನೆ ನೀಡಿ, ಬೀದಿ ನಾಯಿಗಳ ಬಂದೋಬಸ್ತ್ ಮಾಡಲು ಕ್ರಮ ಕೈಗೊಳ್ಳಬೇಕು ಹಾಗೂ ಶಾಲಾ ಮಕ್ಕಳಿಗೆ ಸೂಕ್ತ ಸುರಕ್ಷತೆ ಒದಗಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
