ಖಾನಾಪುರ ತಾಲೂಕಿನ ಇಟಗಿ ಸೇರಿದಂತೆ ಸುತ್ತಮುತ್ತಲಿನ ಎಂಟು ಗ್ರಾಮಗಳಲ್ಲಿ ಹದಗೆಟ್ಟ ರಸ್ತೆಗಳ ದುರಸ್ತಿಗೆ ಆಗ್ರಹಿಸಿ ಗ್ರಾಮಸ್ಥರು ಬೃಹತ್ ಬಂದ್ ಹಾಗೂ ರಸ್ತೆ ತಡೆ ಪ್ರತಿಭಟನೆ ನಡೆಸಿದ್ದಾರೆ. ಅಧಿಕಾರಿಗಳ ಸಮ್ಮುಖದಲ್ಲಿ ಜುಲೈ 31ರಿಂದ ಕಾಮಗಾರಿ ಆರಂಭಿಸುವುದಾಗಿ ಲಿಖಿತ ಭರವಸೆ ಸಿಕ್ಕ ನಂತರವಷ್ಟೇ ಹೋರಾಟವನ್ನು ಹಿಂಪಡೆಯಲಾಗಿದೆ.
ಖಾನಾಪುರ ತಾಲೂಕಿನ ಇಟಗಿ, ಗಂದಿಗವಾಡ, ತೋಲಗಿ, ಬೋಗೂರು, ಬೇಡರಹಟ್ಟಿ, ಕರವಿನಕೊಪ್ಪ, ಚಿಕ್ಕಮುನವಳ್ಳಿ ಹಾಗೂ ಹಿರೆಮುನವಳ್ಳಿ ಗ್ರಾಮಗಳಲ್ಲಿ ರಸ್ತೆ ದುಸ್ಥಿತಿಯನ್ನು ಖಂಡಿಸಿ ಸಾರ್ವಜನಿಕರು ತೀವ್ರ ಪ್ರತಿಭಟನೆ ನಡೆಸಿದರು. ತುರ್ತು ವೈದ್ಯಕೀಯ ಸೇವೆಗಳನ್ನು ಹೊರತುಪಡಿಸಿ, ಶೇಕಡಾ 100ರಷ್ಟು ಯಶಸ್ವಿ ಬಂದ್ ಆಚರಿಸಿದ ಸಾರ್ವಜನಿಕರು ರಸ್ತೆ ತಡೆ ನಡೆಸಿ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಹೋರಾಟದಲ್ಲಿ ರೈತ ಸಂಘಟನೆಗಳು, ಕನ್ನಡ ರಕ್ಷಣಾ ವೇದಿಕೆ, ಮಹಿಳಾ ಮಂಡಳಿಗಳು, ಯುವಕರು ಹಾಗೂ ಸುತ್ತಮುತ್ತಲಿನ ಎಂಟು ಗ್ರಾಮಗಳ ಸಾರ್ವಜನಿಕರು ಭಾರೀ ಸಂಖ್ಯೆಯಲ್ಲಿ ಭಾಗವಹಿಸಿ ಸರ್ಕಾರದ ಗಮನ ಸೆಳೆದರು.

ಸ್ಥಳದಲ್ಲಿ ಸ್ಥಿತಿ ಗಂಭೀರವಾಗುತ್ತಿದ್ದಂತೆ ಖಾನಾಪುರ ತಹಶೀಲ್ದಾರ್ ದುಂಡಪ್ಪ ಕೋಮಾರ, PWD ಅಧಿಕಾರಿಗಳಾದ ಸಂಜಯ ಗಸ್ತಿ ಹಾಗೂ ಪ್ರವೀಣ ಹುಲಜಿ ಭೇಟಿ ನೀಡಿ ಮಾತುಕತೆ ನಡೆಸಿದರು. ಜುಲೈ 31 ಶುಕ್ರವಾರದಿಂದ ಇಟಗಿ ಕ್ರಾಸ್, ಬೇಕವಾಡ, ಹಿರೆಮುನವಳ್ಳಿ, ಬೋಗೂರು ಹಾಗೂ ಗಂದಿಗವಾಡ ಸಂಪರ್ಕಿಸುವ ರಸ್ತೆಗಳ ಗುಂಡಿ ಮುಚ್ಚಿ ಮೆಟಲಿಂಗ್ ಕಾಮಗಾರಿ ಆರಂಭಿಸುವುದಾಗಿ ಮತ್ತು ಮಳೆಗಾಲ ಮುಗಿದ ತಕ್ಷಣ ನೂತನ ರಸ್ತೆ ನಿರ್ಮಿಸುವುದಾಗಿ ಅಧಿಕಾರಿಗಳು ಲಿಖಿತ ಭರವಸೆ ನೀಡಿದರು. ಸುದೀರ್ಘ ಚರ್ಚೆ ಹಾಗೂ ಲಿಖಿತ ಭರವಸೆಯ ಬಳಿಕ ಗ್ರಾಮಸ್ಥರು ತಮ್ಮ ಪ್ರತಿಭಟನೆಯನ್ನು ಹಿಂಪಡೆದರು.
