ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಸಂಬಂಧ ನಡೆದ ಸಭೆಯಲ್ಲಿ ಕಾರ್ಯಕರ್ತರ ನಡುವೆ ವಾಗ್ವಾದ ತಾರಕಕ್ಕೇರಿ ಗಲಾಟೆಯಾಗಿ ಮಾರ್ಪಟ್ಟ ಘಟನೆ ಸೋಮವಾರ ನಗರದಲ್ಲಿರುವ ಆರ್ಟಿಒ ಕಚೇರಿ ಸಮೀಪದ ಕಾಂಗ್ರೆಸ್ ಭವನದಲ್ಲಿ ನಡೆದಿದೆ.


ಜಿಲ್ಲಾಧ್ಯಕ್ಷ ಸ್ಥಾನಕ್ಕಾಗಿ ನಡೆಯುತ್ತಿರುವ ಪೈಪೋಟಿಯ ಹಿನ್ನೆಲೆಯಲ್ಲಿ ವಿವಿಧ ಬಣಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು, ಬಳಿಕ ಪರಿಸ್ಥಿತಿ ಉದ್ವಿಗ್ನಗೊಂಡಿತು. ಸಭೆಯಲ್ಲಿ ಶಾಸಕ ಆಸೀಫ್ ಸೇಠ್ ಉಪಸ್ಥಿತರಿದ್ದ ವೇಳೆ ಈ ಗಲಾಟೆ ನಡೆದಿರುವುದು ಗಮನ ಸೆಳೆಯಿತು. ಘಟನೆಯ ವೇಳೆ ಮಾಜಿ ಶಾಸಕ ರಮೇಶ ಕುಡುಚಿ ಅವರ ಬೆಂಬಲಿಗರು ಹಾಗೂ ಇತರ ಕಾರ್ಯಕರ್ತರ ನಡುವೆ ತಳ್ಳಾಟ-ನೂಕಾಟ ಉಂಟಾಯಿತು. ಈ ವೇಳೆ ರಮೇಶ ಕುಡುಚಿ ಬೆಂಬಲಿಗ ಹೇಮಂತ ಲೆಂಗಡೆ ಅವರ ಮೇಲೆ ಕೆಲ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಘಟನೆಯಿಂದ ಕೆಲಕಾಲ ಕಾಂಗ್ರೆಸ್ ಕಚೇರಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಹಿರಿಯ ಮುಖಂಡರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಅಹಮದಾಬಾದ್ ಎಐಸಿಸಿ ಅಧಿವೇಶನದಲ್ಲಿ ಕೈಗೊಂಡ ನಿರ್ಣಯದಂತೆ ತಳಮಟ್ಟದಿಂದ (ಗ್ರಾಸ್ರೂಟ್) ಪಕ್ಷ ಸಂಘಟನೆ ಕಾರ್ಯ ನಡೆಯುತ್ತಿದ್ದು, ರಾಹುಲ್ ಗಾಂಧಿ ಅವರ ಅಭಿಯಾನದಂತೆ ಕಾರ್ಯಕರ್ತರ ಹಾಗೂ ಬ್ಲಾಕ್, ಬೂತ್ ಮತ್ತು ಜಿಲ್ಲಾ ಪಂಚಾಯತ್ ಅಧ್ಯಕ್ಷರುಗಳ ಅಭಿಪ್ರಾಯ ಸಂಗ್ರಹಿಸಿ ನಾಯಕರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಬೆಳಗಾವಿ ಜಿಲ್ಲೆಯಲ್ಲಿಯೂ ಯಶಸ್ವಿಯಾಗಿ ಸಾಗಿದೆ ಎಂದು ಶಾಸಕ ಆಸೀಫ್ ಸೇಠ್ ಅವರು ತಿಳಿಸಿದ್ದು, ಪಕ್ಷದಲ್ಲಿ ಯಾವುದೇ ಗಲಾಟೆ ಅಥವಾ ಜಗಳ ನಡೆದಿಲ್ಲ, ಬದಲಾಗಿ ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವಾಗ ಸಣ್ಣಪುಟ್ಟ ಚರ್ಚೆ, ಅರ್ಗ್ಯುಮೆಂಟ್ ನಡೆದಿವೆ ಅಷ್ಟೇ ಎಂದು ಸ್ಪಷ್ಟಪಡಿಸಿದ ಅವರು, ನಿಷ್ಠಾವಂತ ಕಾರ್ಯಕರ್ತರು ಕೇಳಿದ ಪ್ರಶ್ನೆಗಳಿಗೆ ಮನೋಜ್ ಚೌಹಾಣ್ ಅವರು ಸೂಕ್ತ ಉತ್ತರ ನೀಡಿದ್ದಾರೆ ಎಂದರು.
