1851ರ ದಶಕದ ವೈಭವದ ಇತಿಹಾಸ ಹೊಂದಿರುವ ಬೆಳಗಾವಿಯ ಮಹಾನಗರ ಪಾಲಿಕೆಯ ಹಳೆಯ ಕಟ್ಟಡ, ಅಂದರೆ ಸದ್ಯದ ತಹಶೀಲ್ದಾರ್ ಕಾರ್ಯಾಲಯ ದಿನದಿಂದ ದಿನಕ್ಕೆ ಭೂತ ಬಂಗಲೆಯಂತೆ ಮಾರ್ಪಟ್ಟು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸೂಕ್ತ ನಿರ್ವಹಣೆ ಇಲ್ಲದೇ ಕುಸಿದು ಬೀಳುವ ಹಂತಕ್ಕೆ ತಲುಪಿರುವ ಈ ಐತಿಹಾಸಿಕ ಕಟ್ಟಡದ ಸದ್ಯದ ಹಾಲತ್ ಕುರಿತಾದ ಒಂದು ವಿಶೇಷ ವರದಿ.

ಸುಮಾರು 175 ವರ್ಷಗಳಷ್ಟು ಹಳೆಯದಾದ ಬೆಳಗಾವಿಯ ಈ ಹೆಮ್ಮೆಯ ಪಾರಂಪರಿಕ ಕಟ್ಟಡದಲ್ಲಿ ಇಂದು ತಹಶೀಲ್ದಾರ್ ಕಚೇರಿ, ಪಿಂಚಣಿ ವಿಭಾಗ ಹಾಗೂ ರೇಷನ್ ಕಾರ್ಡ್ ವಿಭಾಗ ಸೇರಿದಂತೆ 3-4 ಪ್ರಮುಖ ಸರ್ಕಾರಿ ಆಫೀಸ್‌ಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿದಿನ ಬೆಳಗಾವಿ ನಗರ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗಗಳಿಂದ ಸಾವಿರಾರು ಜನರು ತಮ್ಮ ದೈನಂದಿನ ಕೆಲಸ ಕಾರ್ಯಗಳಿಗಾಗಿ ಇಲ್ಲಿಗೆ ಆಗಮಿಸುತ್ತಾರೆ. ಆದರೆ, ಒಮ್ಮೆ ವೈಭವದಿಂದ ಕಂಗೊಳಿಸುತ್ತಿದ್ದ ಈ ಕಟ್ಟಡದ ಗೋಡೆಗಳ ಮೇಲೆಲ್ಲ ಈಗ ಗಿಡಗಂಟಿಗಳು ಬೆಳೆದು ನಿಂತಿದ್ದು, ಕಟ್ಟಡದ ಸ್ವರೂಪವೇ ಸಂಪೂರ್ಣವಾಗಿ ಹಾಳಾಗಿಹೋಗಿದೆ.
ಕಚೇರಿಯ ಒಳಗಡೆ ಹೆಜ್ಜೆ ಇಡುತ್ತಿದ್ದಂತೆ ಬೆಳಕಿನ ವ್ಯವಸ್ಥೆ ಇಲ್ಲದೆ ಕತ್ತಲೆ ಗವಿಯಂತ ವಾತಾವರಣ ಎದುರಾಗುತ್ತದೆ. ಪ್ರಸ್ತುತ ಮಳೆಗಾಲದಲ್ಲಿ ಮೇಲ್ಛಾವಣಿಯಿಂದ ಹನಿಯುವ ನೀರು ಇಡೀ ಕಾರ್ಯಾಲಯವನ್ನು ರೊಜ್ಜು ಮಾಡಿ ಹಾಕಿದ್ದು, ಸಾರ್ವಜನಿಕರು ನಿಂತುಕೊಳ್ಳಲು ಜಾಗವಿಲ್ಲದೆ ಪರದಾಡುವಂತಾಗಿದೆ. ಗೋಡೆಗಳಲ್ಲಿ ಭಾರಿ ಗಾತ್ರದ ಬಿರುಕುಗಳು ಮೂಡಿದ್ದು, ಕಚೇರಿಯೊಳಗೆ ಪ್ರವೇಶಿಸಲು ಸಾರ್ವಜನಿಕರು ಭಯಪಡುವಂತಾಗಿದೆ. ಇದರ ಜೊತೆಗೆ, ಹಗಲು-ರಾತ್ರಿ ಎನ್ನದೇ ಕಚೇರಿಯ ಮುಂಭಾಗ ಹಾಗೂ ಹಿಂಭಾಗದಲ್ಲಿ ನಾಯಿಗಳ ಹಿಂಡು ಬೀಡುಬಿಟ್ಟಿದ್ದು, ಇಲ್ಲಿಗೆ ಬರುವ ಜನರಿಗೆ ನಾಯಿಗಳ ಕಾಟ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ಅಧಿಕಾರಿಗಳು ಮತ್ತು ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ತೀವ್ರ ಬೇಸರ ಹಾಗೂ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. “ಯಾವುದೇ ಕ್ಷಣದಲ್ಲಾದರೂ ಹೆಚ್ಚು-ಕಡಿಮೆಯಾಗಬಹುದು ಎಂಬ ಭಯದಲ್ಲೇ ನಾವು ಇಲ್ಲಿಗೆ ಕೆಲಸಕ್ಕಾಗಿ ಬರಬೇಕಾಗಿದೆ. ಸಾವಿರಾರು ಜನರ ನಿತ್ಯದ ಸಂಪರ್ಕ ಕೇಂದ್ರವಾಗಿರುವ ಈ ಕಟ್ಟಡದ ಗಂಭೀರ ಪರಿಸ್ಥಿತಿಯನ್ನು ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಹೆಚ್ಚೆತ್ತುಕೊಂಡು, ಶೀಘ್ರವಾಗಿ ರಿಪೇರಿ ಹಾಗೂ ಸುಧಾರಣೆ ಮಾಡಿಕೊಡಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.
