hubbali

ಜೋಶಿ ಅವರ ಬಗ್ಗೆ ಹಗುರವಾಗಿ ಮಾತನಾಡಬಾರದು – ಪ್ರಿಯಾಂಕ್ ಖರ್ಗೆಗೆ ಶಾಸಕ ಟೆಂಗಿನಕಾಯಿ ಎಚ್ಚರಿಕೆ

Share

ಕೇಂದ್ರ ಸಚಿವ ಪ್ರಲ್ಲಾದ್ ಜೋಶಿ ಅವರು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯ‌ರ್ ಆಗಲೂ ಯೋಗ್ಯರಲ್ಲ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಅವರ ಟೀಕೆಗೆ ಶಾಸಕ ಮಹೇಶ್ ಟೆಂಗಿನಕಾಯಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಪ್ರಲ್ಲಾದ್ ಜೋಶಿ ಅವರ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಹಗುರವಾಗಿ ಮಾತನಾಡಿರುವುದು ಖಂಡನೀಯ. ಜೋಶಿ ಅವರು ಯಾವುದೇ ರಾಜಕೀಯ ಹಿನ್ನೆಲೆಯಿಂದ ಬಂದವರಲ್ಲ. ರೈಲ್ವೆ ಇಲಾಖೆ ಸಿಬ್ಬಂದಿಯ ಪುತ್ರನಾಗಿ, ಆರ್‌ಎಸ್ಎಸ್ ಒಡನಾಟದ ಮೂಲಕ ರಾಜಕೀಯ ಪ್ರವೇಶಿಸಿ, ಬಿಜೆಪಿ ಬೂತ್ ಮಟ್ಟದಿಂದ ರಾಷ್ಟ್ರಮಟ್ಟದವರೆಗೆ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ಹೋರಾಟಗಳಲ್ಲಿ ಭಾಗವಹಿಸಿ, ಹಲವು ಪ್ರಕರಣಗಳನ್ನು ಎದುರಿಸಿ, ತಮ್ಮ ಪರಿಶ್ರಮದಿಂದ ಕೇಂದ್ರ ಸಚಿವ ಸ್ಥಾನಕ್ಕೇರಿದ್ದಾರೆ ಎಂದು ಟೆಂಗಿನಕಾಯಿ ಹೇಳಿದ್ದಾರೆ.

ಪ್ರಿಯಾಂಕ್ ಖರ್ಗೆ ಅವರು ಅನಗತ್ಯ ಹೇಳಿಕೆ ನೀಡಿ ಟಿಆರ್‌ಪಿ ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡಬಾರದು. ಪ್ರಲ್ಲಾದ್ ಜೋಶಿ ಅವರ ಮೇಯರ್ ಅರ್ಹತೆ ಕುರಿತು ನೀಡಿರುವ ಹೇಳಿಕೆಯನ್ನು ಕೂಡಲೇ ವಾಪಸ್‌ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

ಇನ್ನು, ಸಚಿವ ಸ್ಥಾನಕ್ಕೆ ಸಂಬಂಧಿಸಿದಂತೆ ಮಾತನಾಡಿದ ಟೆಂಗಿನಕಾಯಿ, ಪ್ರಸಾದ್ ಅಬ್ಬಯ್ಯ ಅವರು ಮೂರು ಬಾರಿ ಶಾಸಕರಾಗಿ ಗೆದ್ದಿದ್ದು, ಸಚಿವರಾಗಲು ಅರ್ಹರಾಗಿದ್ದಾರೆ. ಆದರೆ ಅವರಿಗೆ ಸಿಗಬೇಕಿದ್ದ ಸಚಿವ ಸ್ಥಾನವನ್ನು ಪ್ರಿಯಾಂಕ್ ಖರ್ಗೆ ಪಡೆದಿದ್ದಾರೆ ಎಂದು ಟೀಕಿಸಿದ್ದಾರೆ. “ಪ್ರಿಯಾಂಕ್ ಖರ್ಗೆ ಅವರು ತಮ್ಮ ತಂದೆಯ ರಾಜಕೀಯ ಹಿನ್ನೆಲೆಯ ಕಾರಣದಿಂದಲೇ ಸಚಿವರಾಗಿದ್ದಾರೆ” ಎಂದು ಮಹೇಶ್ ಟೆಂಗಿನಕಾಯಿ ಆರೋಪಿಸಿದ್ದಾರೆ.

Tags:

error: Content is protected !!