1999ರ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಸಾಧಿಸಿದ ಐತಿಹಾಸಿಕ ವಿಜಯದ ಸ್ಮರಣಾರ್ಥ ‘ಕಾರ್ಗಿಲ್ ವಿಜಯ ದಿವಸ್’ ಆಚರಿಸಲಾಗುತ್ತಿದೆ. ಈ ಅಂಗವಾಗಿ ಕಿತ್ತೂರು ಕ್ಷೇತ್ರದ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡ ಅವರು ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರ ಯೋಧರ ಸ್ಮಾರಕಗಳಿಗೆ ಪುಷ್ಪಾರ್ಚನೆ ಸಲ್ಲಿಸಿ ಭಾವಪೂರ್ಣ ನಮನ ಸಲ್ಲಿಸಿದರು.


ಕಾರ್ಗಿಲ್ ವಿಜಯ ದಿವಸದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಕಿತ್ತೂರು ಕ್ಷೇತ್ರದ ಮಾಜಿ ಶಾಸಕರಾದ ಮಹಾಂತೇಶ ದೊಡ್ಡಗೌಡ ಅವರು ಕ್ಷೇತ್ರದ ಹಲವು ಗ್ರಾಮಗಳಿಗೆ ಪ್ರವಾಸ ಕೈಗೊಂಡು, ವೀರ ಯೋಧರ ಸ್ಮಾರಕಗಳಿಗೆ ಪುಷ್ಪನಮನ ಸಲ್ಲಿಸಿದರು. ಬಿಜೆಪಿ ಕಾರ್ಯಕರ್ತರೊಂದಿಗೆ ಆಗಮಿಸಿ ಯೋಧರ ಅಮರ ಸೇವೆಯನ್ನು ಸ್ಮರಿಸಿದ ಅವರು, ದೇಶದ ಗಡಿ ಕಾಯ್ದು ಪ್ರಾಣದ ಹದೆಯನ್ನಿಟ್ಟ ವೀರ ಯೋಧರ ಕುಟುಂಬಗಳಿಗೆ ಕೃತಜ್ಞತೆ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡ, ಕಾರ್ಗಿಲ್ ಯುದ್ಧದಲ್ಲಿ ನಮ್ಮ ವೀರ ಯೋಧರು ಪ್ರಾಣವನ್ನೇ ಪಣಕ್ಕಿಟ್ಟು ಶತ್ರು ಪಡೆಗಳನ್ನು ಹಿಮ್ಮೆಟ್ಟಿಸಿ ದೇಶದ ಗೌರವವನ್ನು ಎತ್ತಿಹಿಡಿದಿದ್ದಾರೆ. ಅವರ ಶೌರ್ಯ ಮತ್ತು ತ್ಯಾಗ ಪ್ರತಿಯೊಬ್ಬ ಭಾರತೀಯನಿಗೂ ಪ್ರೇರಣೆಯಾಗಿದ್ದು, ಪ್ರಾಣತ್ಯಾಗ ಮಾಡಿದ ವೀರರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುವುದಾಗಿ ಹೇಳಿದರು. ಇದೇ ಸಂದರ್ಭದಲ್ಲಿ ಕೇಂದ್ರ ಸಚಿವ ಸಂಪುಟದಲ್ಲಿ ಶಿಕ್ಷಣ ಖಾತೆಯ ಜವಾಬ್ದಾರಿ ವಹಿಸಿಕೊಂಡಿರುವ ಪ್ರಹ್ಲಾದ ಜೋಶಿ ಅವರಿಗೂ ಮಹಾಂತೇಶ ದೊಡ್ಡಗೌಡ ಅವರು ಶುಭಾಶಯ ಕೋರಿದರು.
