ದೆಹಲಿ ಭೇಟಿ ಹಾಗೂ ಮಂತ್ರಿ ಮಂಡಲ ವಿಸ್ತರಣೆ ಚರ್ಚೆಗಳ ಕುರಿತು ಅಥಣಿಯಲ್ಲಿ ಶಾಸಕ ಲಕ್ಷ್ಮಣ ಸವದಿ ಪ್ರತಿಕ್ರಿಯಿಸಿದ್ದಾರೆ. ನಾನು ಕೇವಲ ಮಂತ್ರಿ ಸ್ಥಾನಕ್ಕಾಗಿ ಲಾಭಿ ಮಾಡಲು ದೆಹಲಿಗೆ ಹೋಗಿರಲಿಲ್ಲ ಎಂದಿರುವ ಅವರು, ಸಚಿವ ಸ್ಥಾನ ಸಿಗುತ್ತೋ ಇಲ್ಲವೋ ಎಂಬ ಬಗ್ಗೆ ಒಂದೆರಡು ವಾರ ಕಾದು ನೋಡಿ ಎಂದಿದ್ದಾರೆ.

ತಮ್ಮ ದೆಹಲಿ ಪ್ರವಾಸ ಹಾಗೂ ಸಚಿವ ಸಂಪುಟ ವಿಸ್ತರಣೆಯ ಚರ್ಚೆಗಳ ಕುರಿತು ಶಾಸಕ ಲಕ್ಷ್ಮಣ ಸವದಿ ಅಥಣಿಯಲ್ಲಿ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ. “ನಾನು ಕೇವಲ ಮಂತ್ರಿ ಸ್ಥಾನಕ್ಕಾಗಿ ಲಾಭಿ ಮಾಡಲಿಕ್ಕೆ ದೆಹಲಿಗೆ ಹೋಗಿರಲಿಲ್ಲ, ಬೇರೆ ಬೇರೆ ಕೆಲಸಗಳ ನಿಮಿತ್ತವಾಗಿಯೂ ಸಹ ಹೋಗಿದ್ದೆ. ಮಾಜಿ ಮತ್ತು ಹಾಲಿ ಮುಖ್ಯಮಂತ್ರಿಗಳು ದೆಹಲಿಗೆ ಬಂದಿದ್ದರಿಂದ ನಾನು ಸಹಜವಾಗಿ ದೆಹಲಿಯಲ್ಲಿ ಅವರನ್ನು ಭೇಟಿಯಾಗಿದ್ದೆ. ಮಂತ್ರಿ ಮಂಡಲದ ವಿಸ್ತರಣೆ ಮಾಡಬೇಕು ಎನ್ನುವುದು ಎಲ್ಲರ ಭಾವನೆಯಾಗಿದೆ. ಆದರೆ ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಕೇಂದ್ರದ ವರಿಷ್ಠರು ಪ್ರತಿಭಟನೆಯಲ್ಲಿ ಬ್ಯುಸಿಯಾಗಿದ್ದರು. ಹೀಗಾಗಿ ಸಭೆ ಮಾಡಲು ಅವಕಾಶವಾಗಲಿಲ್ಲ. ರವಿವಾರ ಅಥವಾ ಸೋಮವಾರ ಮತ್ತೆ ದೆಹಲಿಗೆ ಹೋಗಬಹುದು, ವರಿಷ್ಠರ ಒಪ್ಪಿಗೆ ಪಡೆದ ಮೇಲೆ ಮಂತ್ರಿ ಮಂಡಲ ವಿಸ್ತರಣೆ ಮಾಡುತ್ತಾರೆ” ಎಂದು ಹೇಳಿದರು.
ಸಚಿವ ಸ್ಥಾನ ಸಿಗುತ್ತಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಲಕ್ಷ್ಮಣ ಸವದಿ, “ಮಾಧ್ಯಮಗಳಲ್ಲಿ ನನ್ನ ಹೆಸರು ಸೇರಿದಂತೆ ಇನ್ನಿತರ ಶಾಸಕರ ಹೆಸರು ಬರುತ್ತಿರುವುದನ್ನು ನಾನು ಸಹ ನೋಡಿದ್ದೇನೆ. ರಾಜ್ಯದಲ್ಲಿ ಮುಖ್ಯಮಂತ್ರಿಗಳು ಹಾಗೂ ಪಕ್ಷದ ವರಿಷ್ಠರು ಏನು ತೀರ್ಮಾನ ಕೈಗೊಳ್ಳುತ್ತಾರೋ ಅದು ಅಂತಿಮವಾಗಿರುತ್ತದೆ. ಕಾಂಗ್ರೆಸ್‌ಗೆ ಸೇರ್ಪಡೆಯಾಗುವ ಸಂದರ್ಭದಲ್ಲಿ ಸಚಿವ ಸ್ಥಾನ ನೀಡುತ್ತೇವೆ ಎಂದು ಭರವಸೆ ನೀಡಿದ್ದರೆಂಬ ಚರ್ಚೆಯ ವಿಷಯಕ್ಕೆ ಬಂದರೆ, ನನ್ನ ಹಾಗೂ ಹೈಕಮಾಂಡ್ ನಡುವೆ ಚರ್ಚೆಯಾಗಿದ್ದು ನಮಗೆ ಮಾತ್ರ ಗೊತ್ತು, ಜನರಿಗೆ ಅದರ ಬಗ್ಗೆ ಗೊತ್ತಿಲ್ಲ. ಒಂದು ವಾರ ಕಾಯ್ದು ನೋಡಿ, ಸಚಿವ ಸ್ಥಾನ ಸಿಗುತ್ತೋ ಇಲ್ಲವೋ ಎಂದು ಗೊತ್ತಾಗುತ್ತದೆ” ಎಂದು ಪ್ರತಿಕ್ರಿಯಿಸಿದರು.
