ಖಾನಾಪುರ ತಾಲೂಕಿನ ಮಾಡಿಗುಂಜಿ ಗ್ರಾಮದಲ್ಲಿ ಕಳೆದ 15 ದಿನಗಳಿಂದ ಚಿರತೆಯೊಂದು ಭೀತಿ ಸೃಷ್ಟಿಸಿದ್ದು, ಶೌಚಾಲಯದಲ್ಲಿ ರಾತ್ರಿ ಪೂರ್ತಿ ಇಳಿದು ಬೆಳಿಗ್ಗೆ ಪ್ರತ್ಯಕ್ಷವಾದ ಘಟನೆ ನಡೆದಿದೆ. ಅರಣ್ಯ ಇಲಾಖೆ ಬೋನು ಅಳವಡಿಸಿ ಗಸ್ತು ಹೆಚ್ಚಿಸಿದ್ದರೂ ಚಿರತೆ ಇನ್ನೂ ಸೆರೆಯಾಗದೇ ಇರುವುದು ಗ್ರಾಮಸ್ಥರಲ್ಲಿ ತೀವ್ರ ಆತಂಕ ಮೂಡಿಸಿದೆ.

ಖಾನಾಪುರ ತಾಲೂಕಿನ ಮಾಡಿಗುಂಜಿ ಗ್ರಾಮದಲ್ಲಿ ಕಳೆದ ಹದಿನೈದು ದಿನಗಳಿಂದ ಚಿರತೆಯೊಂದು ಸತತವಾಗಿ ಪ್ರತ್ಯಕ್ಷವಾಗುತ್ತಿದ್ದು, ಗ್ರಾಮಸ್ಥರು ಭೀತಿಯ ನೆರಳಿನಲ್ಲಿ ಕಾಲ ಕಳೆಯುವಂತಾಗಿದೆ. ನಿನ್ನೆ ರಾತ್ರಿ ಗ್ರಾಮದ ಪ್ರಸಾದ್ ಘಾಡಿ ಎಂಬುವರ ಮನೆಯ ಶೌಚಾಲಯದೊಳಗೆ ನುಗ್ಗಿದ ಚಿರತೆ ರಾತ್ರಿ ಪೂರ್ತಿ ಅಲ್ಲೇ ಅಡಗಿ ಕುಳಿತಿತ್ತು. ಬೆಳಿಗ್ಗೆ ಮನೆಯವರು ಶೌಚಾಲಯದತ್ತ ಹೋದಾಗ ಚಿರತೆ ಎದುರಾಗಿದ್ದು, ಕ್ಷಣಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಸದ್ದು ಗದ್ದಲ ಉಂಟಾಗುತ್ತಿದ್ದಂತೆ ಚಿರತೆ ಶೌಚಾಲಯದಿಂದ ಹೊರಬಿದ್ದು ಸಮೀಪದ ಅರಣ್ಯದತ್ತ ಓಡಿಹೋಗಿದೆ.
ಚಿರತೆಯು ಕೇವಲ ವಸತಿ ಪ್ರದೇಶ ಮಾತ್ರವಲ್ಲದೇ ಮಾಡಿಗುಂಜಿಯ ಪ್ರಸಿದ್ಧ ಮಾವುಲಿ ದೇವಾಲಯದ ಆವರಣದಲ್ಲೂ ಪ್ರತ್ಯಕ್ಷವಾಗುತ್ತಿದ್ದು, ದೇವಾಲಯಕ್ಕೆ ಬರುವ ಭಕ್ತಾದಿಗಳು ಹಾಗೂ ಸ್ಥಳೀಯರಲ್ಲಿ ತೀವ್ರ ಭಯ ಆವರಿಸಿದೆ. ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಚಿರತೆ ಸೆರೆಹಿಡಿಯಲು ಬೋನು ಅಳವಡಿಸಿದ್ದು, ಗಸ್ತು ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದಾರೆ. ಆದಾಗ್ಯೂ ಚಿರತೆ ಇನ್ನೂ ಇಲಾಖೆಯ ಕೈಗೆ ಸಿಗದೇ ಇರುವುದು ಗ್ರಾಮಸ್ಥರ ನಿದ್ರೆ ಕೆಡಿಸಿದೆ.
