Vijaypura

ವಿಠ್ಠಲ ನಾಮಸ್ಮರಣೆಗೆ ಮೊಳಗಿದ ವಿಜಯಪುರ; ವಿದ್ಯಾರ್ಥಿಗಳ ಅದ್ಧೂರಿ ದಿಂಡಿ ಮೆರವಣಿಗೆ

Share

ವಿಜಯಪುರ ನಗರದ ಪ್ರಮುಖ ರಸ್ತೆಗಳಲ್ಲಿ “ವಿಠ್ಠಲ… ವಿಠ್ಠಲ…” ಎಂಬ ನಾಮಸ್ಮರಣೆ ಮೊಳಗುತ್ತಿತ್ತು… ಎತ್ತಿನ ಬಂಡಿಯಲ್ಲಿ ವಿರಾಜಮಾನವಾಗಿದ್ದ ಶ್ರೀ ವಿಠ್ಠಲನ ಪಲ್ಲಕ್ಕಿ… ಅದರ ಹಿಂದೆ ಸಾಂಪ್ರದಾಯಿಕ ವೇಷಭೂಷಣದಲ್ಲಿ ಹೆಜ್ಜೆ ಹಾಕುತ್ತಿದ್ದ ನೂರಾರು ವಿದ್ಯಾರ್ಥಿಗಳು… ತಾಳ-ಮೃದಂಗ, ಲೇಜಿಮ್, ವಾರಕರಿ ನೃತ್ಯ, ಭಜನೆಗಳ ಸಮ್ಮಿಲನ… ಕ್ಷಣಕಾಲ ಪಂಡರಪುರವೇ ವಿಜಯಪುರಕ್ಕೆ ಬಂದಂತ ಭಾಸವಾಗುವಂತಹ ಅಪರೂಪದ ದೃಶ್ಯಕ್ಕೆ ನಗರ ಸಾಕ್ಷಿಯಾಯಿತು. ಹಾಗಾದರೆ ಈ ಭಕ್ತಿ ವೈಭವಕ್ಕೆ ಕಾರಣವೇನು? ಈ ಕುರಿತು ಇಲ್ಲಿದೆ ಒಂದು ವಿಶೇಷ ವರದಿ…

ಆಷಾಢ ಏಕಾದಶಿ ಅಂಗವಾಗಿ ವಿಜಯಪುರ ನಗರದ ಛತ್ರಪತಿ ಶಿವಾಜಿ ಮಹಾರಾಜ ಶಿಕ್ಷಣ ಸಂಸ್ಥೆಯ ರವೀಂದ್ರನಾಥ ಠಾಗೋರ್ ಸಿಬಿಎಸ್ಇ ಶಾಲೆಯ ವತಿಯಿಂದ ವಿಶೇಷ ಭಕ್ತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಾಲಾ ಆವರಣದಲ್ಲಿ ಶ್ರೀ ವಿಠ್ಠಲನ ಪಲ್ಲಕ್ಕಿಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ಸಾಂಪ್ರದಾಯಿಕ ವೇಷಭೂಷಣ ತೊಟ್ಟ ವಿದ್ಯಾರ್ಥಿಗಳು ಭಜನೆ, ತಾಳ-ಮೃದಂಗ ಹಾಗೂ “ವಿಠ್ಠಲ… ವಿಠ್ಠಲ…” ಎಂಬ ನಾಮಸ್ಮರಣೆಯೊಂದಿಗೆ ಭಕ್ತಿ ದಿಂಡಿ ಆರಂಭಿಸಿದರು. ಎತ್ತಿನ ಬಂಡಿಯಲ್ಲಿ ವಿರಾಜಮಾನವಾಗಿದ್ದ ಶ್ರೀ ವಿಠ್ಠಲನ ಪಲ್ಲಕ್ಕಿ ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿತ್ತು. ಭಜನೆಗಳ ನಿನಾದ, ಶಂಖನಾದ ಮತ್ತು ಭಕ್ತಿಗೀತೆಗಳ ನಡುವೆ ಇಡೀ ಶಾಲಾ ಆವರಣವೇ ಪಂಡರಪುರದ ಭಕ್ತಿ ವಾತಾವರಣವನ್ನು ನೆನಪಿಸುವಂತಿತ್ತು. ಸುಮಾರು 500 ವಿದ್ಯಾರ್ಥಿಗಳು ಲೇಜಿಮ್, ಚಳ್ಳಂ ಹಾಗೂ ವಾರಕರಿ ನೃತ್ಯ ಪ್ರದರ್ಶಿಸುವ ಮೂಲಕ ನೆರೆದಿದ್ದವರ ಮನಸೂರೆಗೊಂಡರು. ಪುಟ್ಟ ಮಕ್ಕಳಿಂದ ಹಿಡಿದು ಹಿರಿಯ ವಿದ್ಯಾರ್ಥಿಗಳವರೆಗೆ ಎಲ್ಲರೂ ಸಾಂಪ್ರದಾಯಿಕ ಉಡುಗೆಯಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಿ ಭಾರತೀಯ ಸಂಸ್ಕೃತಿಯ ಶ್ರೀಮಂತಿಕೆಯನ್ನು ಅನಾವರಣ ಗೊಳಿಸಿದರು. ಶಾಲೆಯಿಂದ ವಿಠ್ಠಲ ಮಂದಿರದವರೆಗೆ ಸಾಗಿದ ಮೆರವಣಿಗೆಯಲ್ಲಿ ಭಕ್ತಿಗೀತೆಗಳು ಮೊಳಗುತ್ತಿದ್ದರೆ, ಮಾರ್ಗದುದ್ದಕ್ಕೂ ಸಾರ್ವಜನಿಕರು ವಿದ್ಯಾರ್ಥಿಗಳ ಪ್ರದರ್ಶನವನ್ನು ಕಣ್ತುಂಬಿಕೊಂಡು ಚಪ್ಪಾಳೆ ತಟ್ಟಿ ಅಭಿನಂದಿಸಿದರು. ಹಲವೆಡೆ ಹೂವಿನ ಮಳೆ ಸುರಿಸಿ ದಿಂಡಿಗೆ ಸ್ವಾಗತ ಕೋರಲಾಯಿತು. ವಿಠ್ಠಲನ ಜಯಘೋಷಗಳಿಂದ ಇಡೀ ಪರಿಸರ ಭಕ್ತಿಮಯವಾಗಿ ಮಾರ್ಪಟ್ಟಿತ್ತು.

ಇನ್ನೂ ಕಾರ್ಯಕ್ರಮವು ಕೇವಲ ಸಾಂಸ್ಕೃತಿಕ ಪ್ರದರ್ಶನವಾಗಿರದೆ, ಭಾರತೀಯ ಸಂಸ್ಕೃತಿ, ಭಕ್ತಿ ಹಾಗೂ ಪರಂಪರೆಯ ಮೌಲ್ಯಗಳನ್ನು ಮಕ್ಕಳಲ್ಲಿ ಬಿತ್ತುವ ಉದ್ದೇಶವನ್ನು ಹೊಂದಿತ್ತು. ಇಂದಿನ ಆಧುನಿಕ ಯುಗದಲ್ಲಿ ನಮ್ಮ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಪ್ರಯತ್ನವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಶಾಲೆಯ ಶಿಕ್ಷಕರು ಹಾಗೂ ಪೋಷಕರೂ ವಿದ್ಯಾರ್ಥಿಗಳೊಂದಿಗೆ ಹೆಜ್ಜೆ ಹಾಕಿ ಮೆರವಣಿಗೆಯ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿದರು. ಭಕ್ತಿ, ಶಿಸ್ತು ಮತ್ತು ಸಂಸ್ಕೃತಿಯ ಅಪೂರ್ವ ಸಂಗಮವಾಗಿ ಮೂಡಿಬಂದ ಈ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಛತ್ರಪತಿ ಶಿವಾಜಿ ಮಹಾರಾಜ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಿವಾಜಿ ಗಾಯಕವಾಡ ಅವರ ಮಾರ್ಗದರ್ಶನದಲ್ಲಿ ನಡೆದ ಈ ಭಕ್ತಿ ದಿಂಡಿ ಯಶಸ್ವಿಯಾಗಿ ಸಂಪನ್ನಗೊಂಡಿತು.

ಒಟ್ನಲ್ಲಿ ಭಕ್ತಿ, ಸಂಸ್ಕೃತಿ ಮತ್ತು ಪರಂಪರೆಯ ಅಪೂರ್ವ ಸಂಗಮವಾಗಿ ಮೂಡಿಬಂದ ಈ ದಿಂಡಿ-ಪಲ್ಲಕ್ಕಿ ಮೆರವಣಿಗೆ ಆಷಾಢ ಏಕಾದಶಿಯ ಸಂಭ್ರಮವನ್ನು ಮತ್ತಷ್ಟು ಕಂಗೊಳಿಸಿತು. ವಿದ್ಯಾರ್ಥಿಗಳಲ್ಲಿ ಭಾರತೀಯ ಸಂಸ್ಕೃತಿಯ ಬಗ್ಗೆ ಗೌರವ, ಭಕ್ತಿ ಮತ್ತು ಸಂಪ್ರದಾಯದ ಅರಿವು ಮೂಡಿಸುವ ಶಾಲೆಯ ಈ ವಿಶಿಷ್ಟ ಪ್ರಯತ್ನ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆಗೆ ಪಾತ್ರವಾಯಿತು. ವಿಜಯಪುರದಲ್ಲಿ ಭಕ್ತಿ ಮತ್ತು ಸಂಸ್ಕೃತಿಯ ಹಬ್ಬದ ವಾತಾವರಣವನ್ನು ಸೃಷ್ಟಿಸಿದ ಈ ಕಾರ್ಯಕ್ರಮ ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದ ನೆನಪಾಗಿ ಉಳಿಯಿತು.

ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ..

Tags:

error: Content is protected !!