Chikkodi

ಬೈಪಾಸ್ ರಸ್ತೆಗೆ ಜಮೀನು ಸ್ವಾಧೀನ: ಎಕರೆಗೆ ₹4-5 ಕೋಟಿ ಪರಿಹಾರಕ್ಕೆ ಆಗ್ರಹಿಸಿ ಚಿಕ್ಕೋಡಿಯಲ್ಲಿ ಜುಲೈ 30ಕ್ಕೆ ಉಗ್ರ ಪ್ರತಿಭಟನೆ:ಚುನ್ನಪ್ಪ ಪೂಜೇರಿ

Share

ಪಟ್ಟಣದ ಹೊರವಲಯದಲ್ಲಿ ನಿರ್ಮಾಣವಾಗುತ್ತಿರುವ ಗೋಟೂರ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ರಸ್ತೆಗೆ ಜಮೀನು ನೀಡಿದ ರೈತರಿಗೆ ಸೂಕ್ತ ಪರಿಹಾರ ನೀಡುವಲ್ಲಿ ಸರ್ಕಾರ ತಾರತಮ್ಯ ಎಸಗುತ್ತಿದೆ ಎಂದು ಆರೋಪಿಸಿ, ಪ್ರತಿ ಎಕರೆಗೆ ₹4 ರಿಂದ ₹5 ಕೋಟಿ ಪರಿಹಾರ ಧನ ನೀಡುವಂತೆ ಒತ್ತಾಯಿಸಿ ಜುಲೈ 30 ರಂದು ಬೆಳಿಗ್ಗೆ 10 ಗಂಟೆಗೆ ಪಟ್ಟಣದ ಬಸವ ವೃತ್ತದಲ್ಲಿ 10 ಸಾವಿರ ರೈತರೊಂದಿಗೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚೂನ್ನಪ್ಪ ಪೂಜಾರಿ ತಿಳಿಸಿದರು.

ಚಿಕ್ಕೋಡಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಗೋಟೂರ-ವಿಜಯಪುರ ಹೆದ್ದಾರಿಯು ಚಿಕ್ಕೋಡಿ ಪಟ್ಟಣದಲ್ಲಿ ಒಟ್ಟು 6 ಕಿ.ಮೀ ಹಾದುಹೋಗಲಿದೆ. ಆದರೆ ಸರ್ಕಾರ ಪ್ರತಿ ಗುಂಟೆಗೆ ಕೇವಲ ₹80 ಸಾವಿರ ಹಾಗೂ ಎಕರೆಗೆ ₹30 ಲಕ್ಷ ದರ ನಿಗದಿ ಮಾಡಿದ್ದು, ಇದು ಸಂಪೂರ್ಣ ಅವೈಜ್ಞಾನಿಕವಾಗಿದೆ.ಬೆಂಗಳೂರಿನ ಬಿಡದಿಯಲ್ಲಿ ಎಕರೆ ಭೂಮಿಗೆ ಕೋಟಿಗಟ್ಟಲೆ ಹಣ ನೀಡುವ ಸರ್ಕಾರ, ಶೈಕ್ಷಣಿಕ ಜಿಲ್ಲೆಯಾದ ಚಿಕ್ಕೋಡಿಯ ಗಡಿಭಾಗದ ರೈತರಿಗೆ ಬಿಡಿಗಾಸು ಪರಿಹಾರ ಘೋಷಿಸಿ ತಾರತಮ್ಯ ಮಾಡುತ್ತಿದೆ. ಈ ದರವನ್ನು ತಕ್ಷಣವೇ ಪರಿಷ್ಕರಿಸದಿದ್ದರೆ ಉಗ್ರ ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಬರ ಪರಿಹಾರವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು.
ಬಾಕಿ ಇರುವ ಏತ ನೀರಾವರಿ ಯೋಜನೆಗಳನ್ನು ಶೀಘ್ರ ಪೂರ್ಣಗೊಳಿಸಬೇಕು.
ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತು ಪ್ರತಿಕ್ರಿಯಿಸಿ, ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡಬಾರದು ಎಂದು ಆಗ್ರಹಿಸಿದರು.ಜುಲೈ 30 ರಂದು ನಡೆಯುವ ಪ್ರತಿಭಟನಾ ಸ್ಥಳಕ್ಕೆ ಸ್ಥಳೀಯ ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಖುದ್ದಾಗಿ ಆಗಮಿಸಿ ರೈತರ ಸಮಸ್ಯೆಗೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತ ನಾಯಕರು ಒತ್ತಾಯಿಸಿದ್ದಾರೆ.

ಬೈಟ್-ಚುನ್ನಪ್ಪ ಪೂಜೇರಿ,ಕರ್ನಾಟಕ ರಾಜ್ಯ ರೈತ‌ ಸಂಘದ ಅಧ್ಯಕ್ಷ

ಈ ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರಾದ ಸತ್ಯಪ್ಪಾ ಮಲ್ಲಾಪೂರೆ, ಮಲ್ಲಪ್ಪಾ ಅಂಗಡಿ, ಮನೋಜ ಮನಗೂಳಿ, ಸಂಜು ಚನ್ನವರ, ಸಹದೇವ ಚಿಮ್ಮಟ, ರವೀಂದ್ರ ಕುಂಬೋಜ, ಕಲಗೌಡಾ ಪಾಟೀಲ ಹಾಗೂ ಗೋಪಾಲ ಕನ್ನೂರೆ ಉಪಸ್ಥಿತರಿದ್ದರು.

Tags:

error: Content is protected !!