ಆ ತಾಯಿ ಆಧಿಶಕ್ತಿ,ಪರಾಶಕ್ತಿ ಎಂದೆಲ್ಲಾ ನಾಮದಿಂದ ಪರಿಚಿತಳು. ಆ ತಾಯಿಗೆ ಜಗತ್ತಿನೆಲ್ಲೆಡೆ ಭಕ್ತರು. ಭಕ್ತರು ಇದ್ದೊಡೆ ದೇವಸ್ಥಾನ ಇರಲೇಬೇಕು. ಹೀಗೆಯೇ ಒಂದು ದೇವಸ್ಥಾನವನ್ನು ಕಟ್ಟಿ ಆ ಜಗತ್ ಜನನಿಯನ್ನು ಪೂಜಿಸಲಾಗುತ್ತಿದೆ. ಆ ದೇವಸ್ಥಾನಕ್ಕೆ ಇದೀಗ 14 ವರ್ಷಗಳ ಸಂಭ್ರಮ. ಹೀಗಾಗಿ ವಿವಿಧ ಕಾರ್ಯಕ್ರಮ ಆಯೋಜನೆ ಮೂಲಕ ವಿಶೇಷ ಪೂಜೆ ನಡೆಸಲಾಯಿತು. ಈ ಕುರಿತು ಇಲ್ಲಿದೆ ಒಂದು ವರದಿ…


ಹೌದು.. ವಿಜಯಪುರ ನಗರದ ಜೋರಾಪುರ ಪೇಠೆಯಲ್ಲಿರುವ ಐತಿಹಾಸಿಕ ಶ್ರೀ ಅಂಬಾಭವಾನಿ ದೇವಸ್ಥಾನದಲ್ಲಿ 14ನೇ ವರ್ಷದ ವಾರ್ಷಿಕೋತ್ಸವವನ್ನು ಭಕ್ತಿ, ಶ್ರದ್ಧೆ ಹಾಗೂ ಧಾರ್ಮಿಕ ವೈಭವದೊಂದಿಗೆ ಆಚರಿಸ ಲಾಯಿತು. ಬೆಳಗ್ಗೆಯಿಂದಲೇ ನಿತ್ಯ ಪೂಜೆ, ಪಂಚಾಮೃತ ಅಭಿಷೇಕ, ವಿವಿಧ ಹೋಮಗಳು, ಪಲ್ಲಕ್ಕಿ ಉತ್ಸವ, ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಮಹಾಪ್ರಸಾದದ ವ್ಯವಸ್ಥೆ ನಡೆದಿದ್ದು, ಸಾವಿರಾರು ಭಕ್ತರು ದೇವಿಯ ಕೃಪೆಗೆ ಪಾತ್ರರಾದರು. ಪ್ರಾತಃಕಾಲ 5.30ರಿಂದ 7 ಗಂಟೆಯವರೆಗೆ ನಿತ್ಯ ಪೂಜೆ, ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಹರಿದ್ರಾ ಹಾಗೂ ಕುಂಕುಮಾಭಿಷೇಕ ಮತ್ತು ವಿಶೇಷ ಅಲಂಕಾರ ಪೂಜೆಗಳು ವೈದಿಕ ವಿಧಿವಿಧಾನಗಳೊಂದಿಗೆ ನೆರವೇರಿದವು. ವಿವಿಧ ಬಗೆಯ ಹೂವುಗಳು, ರೇಷ್ಮೆ ವಸ್ತ್ರಗಳು ಹಾಗೂ ಆಭರಣಗಳಿಂದ ಅಲಂಕರಿಸಲ್ಪಟ್ಟ ಅಂಬಾಭವಾನಿ ದೇವಿಯ ದಿವ್ಯ ರೂಪ ಭಕ್ತರನ್ನು ಭಕ್ತಿಭಾವದಲ್ಲಿ ತೇಲುವಂತೆ ಮಾಡಿತು.

ಇನ್ನೂ ನವಗ್ರಹ ಹೋಮ, ದಿಕ್ಷಾಲಕ ಹೋಮ ಹಾಗೂ ಶ್ರೀಸೂಕ್ತ ಮಹಾಲಕ್ಷ್ಮೀ ಹೋಮವನ್ನು ಪೂರ್ಣಾಹುತಿ ಯೊಂದಿಗೆ ನೆರವೇರಿಸಲಾಯಿತು. ನಂತರ ನಡೆದ ಪಲ್ಲಕ್ಕಿ ಉತ್ಸವದಲ್ಲಿ ಉತ್ಸವ ಮೂರ್ತಿಯನ್ನು ಭವ್ಯವಾಗಿ ಅಲಂಕರಿಸಿದ ಪಲ್ಲಕ್ಕಿಯಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಡೊಳ್ಳು, ತಾಶಾ, ಮಂಗಳ ವಾದ್ಯಗಳು ಹಾಗೂ “ಜೈ ಅಂಬೇ” ಘೋಷಣೆಗಳಿಂದ ಇಡೀ ಪ್ರದೇಶ ಭಕ್ತಿಮಯ ವಾತಾವರಣದಿಂದ ಕಂಗೊಳಿಸಿತು. ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಭಕ್ತಿಭಾವದಿಂದ ನಡೆಯಿತು. ನೂರಾರು ಮಹಿಳೆಯರು ಪಾಲ್ಗೊಂಡು ದೇವಿಯ ಆಶೀರ್ವಾದ ಪಡೆದರು. ಬಳಿಕ ಮಧ್ಯಾಹ್ನ ಮಹಾಪ್ರಸಾದ ವಿತರಣೆ ನಡೆಯಿತು. ದೇವಸ್ಥಾನವನ್ನು ವಿದ್ಯುತ್ ದೀಪಾಲಂಕಾರ ಹಾಗೂ ಪುಷ್ಪಾಲಂಕಾರದಿಂದ ಸಿಂಗರಿಸಲಾಗಿದ್ದು, ದೇವಿಯ ವಿವಿಧ ರೂಪಕಗಳು ಭಕ್ತರ ಗಮನ ಸೆಳೆದವು. 14ನೇ ವರ್ಷದ ಈ ವಾರ್ಷಿಕೋತ್ಸವ ಧಾರ್ಮಿಕ ಸಂಭ್ರಮ, ಸಾಂಸ್ಕೃತಿಕ ವೈಭವ ಹಾಗೂ ಭಕ್ತಿಯ ಮಹೋತ್ಸವವಾಗಿ ಯಶಸ್ವಿಯಾಗಿ ಸಂಪನ್ನವಾಯಿತು.
ಒಟ್ಟಾರೆ, ಭಕ್ತಿ, ಸಂಪ್ರದಾಯ ಮತ್ತು ಸಾಂಸ್ಕೃತಿಕ ವೈಭವ ಒಂದೇ ವೇದಿಕೆಯಲ್ಲಿ ಅನಾವರಣಗೊಂಡ ಶ್ರೀ ಅಂಬಾಭವಾನಿ ದೇವಿಯ 14ನೇ ವರ್ಷದ ವಾರ್ಷಿಕೋತ್ಸವ ಭಕ್ತರ ಮನದಲ್ಲಿ ಅಚಲವಾದ ಭಕ್ತಿಭಾವ ಮೂಡಿಸಿತು. ವಿಶೇಷ ಪೂಜೆಗಳಿಂದ ಹಿಡಿದು ಪಲ್ಲಕ್ಕಿ ಉತ್ಸವ, ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಮಹಾಪ್ರಸಾದದವರೆಗೆ ಪ್ರತಿಯೊಂದು ಕಾರ್ಯಕ್ರಮವೂ ಶಿಸ್ತುಬದ್ಧವಾಗಿ ನಡೆದಿದ್ದು, ಭಕ್ತರು ದೇವಿಯ ದರ್ಶನ ಪಡೆದು ಆಶೀರ್ವಾದದೊಂದಿಗೆ ಹಿಂತಿರುಗಿದರು. ವಿಜಯಪುರದಲ್ಲಿ ಈ ಧಾರ್ಮಿಕ ಸಂಭ್ರಮ ಭಕ್ತಿ ಮತ್ತು ಸಾಂಸ್ಕೃತಿಕ ಪರಂಪರೆಯ ಅದ್ಭುತ ಸಂಗಮವಾಗಿ ಮೂಡಿಬಂದಿತು.
ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ.
