ಮಾಧಕ ದ್ರವ್ಯಗಳ ದುಷ್ಪರಿಣಾಮ ತಡೆಯಲು ಸಮಾಜದಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯ. ವಿದ್ಯಾರ್ಥಿಗಳು ಹಾಗೂ ಯುವಜನತೆ ಮಾಧಕ ದ್ರವ್ಯಗಳಿಗೆ ದೃಢವಾಗಿ ‘ನೋ’ ಎಂದು ಹೇಳುವ ಆತ್ಮವಿಶ್ವಾಸ ಬೆಳೆಸಿಕೊಂಡಾಗ ಮಾತ್ರ ಡ್ರಗ್ಸ್ ಬೇಡಿಕೆಯನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯ ಎಂದು ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಭಿಪ್ರಾಯಪಟ್ಟಿದ್ದಾರೆ.


ಬೆಳಗಾವಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ‘ಮಾಧಕ ದ್ರವ್ಯ ತಡೆಗಟ್ಟುವಿಕೆ ಕುರಿತ ಜಿಲ್ಲಾ ಮಟ್ಟದ ಸಮಾಲೋಚನಾ ಸಭೆ’ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಾಧಕ ದ್ರವ್ಯಗಳ ಯುವಜನತೆಯ ಮೇಲಿನ ದುಷ್ಪರಿಣಾಮ ತಡೆಯಲು ಸಮಾಜದಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ. ವಿದ್ಯಾರ್ಥಿಗಳು ಹಾಗೂ ಯುವಜನತೆ ಮಾಧಕ ದ್ರವ್ಯಗಳಿಗೆ ದೃಢವಾಗಿ ‘ನೋ’ (ಇಲ್ಲ) ಎಂದು ಹೇಳುವ ಆತ್ಮವಿಶ್ವಾಸ ಬೆಳೆಸಿಕೊಂಡಾಗ ಮಾತ್ರ ಡ್ರಗ್ಸ್ ಬೇಡಿಕೆಯನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯ. ಬೇಡಿಕೆ ಕಡಿಮೆಯಾದರೆ ಸರಬರಾಜು ಜಾಲವನ್ನು ಧ್ವಂಸಗೊಳಿಸಲು ಆಡಳಿತ ವ್ಯವಸ್ಥೆಗೆ ಸುಲಭವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ‘ಬೇಡ ಬ್ರೋ’ ಹಾಗೂ ‘ರೈಸ್’ (RISE) ನಂತಹ ವಿಶೇಷ ಜಾಗೃತಿ ಕಾರ್ಯಕ್ರಮಗಳನ್ನು ಉಲ್ಲೇಖಿಸಿದ ಜಿಲ್ಲಾಧಿಕಾರಿಗಳು, ಪ್ರತಿಯೊಬ್ಬರೂ ಜವಾಬ್ದಾರಿಯಿಂದ ಮಾಧಕ ದ್ರವ್ಯಗಳಿಂದ ದೂರವಿದ್ದು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕೆಂದು ಕರೆ ನೀಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಮಂಜುನಾಥ ನಾಯಕ್, ಅವರು ಮಾದಕ ದ್ರವ್ಯ ವ್ಯಸನದಿಂದ ವಿದ್ಯಾರ್ಥಿಗಳು ಹಾಗೂ ಯುವಜನತೆಯನ್ನು ರಕ್ಷಿಸುವುದು ಸಮಾಜದ ಮುಖ್ಯ ಜವಾಬ್ದಾರಿಯಾಗಿದ್ದು, ಮಾದಕ ದ್ರವ್ಯಗಳ ಬೇಡಿಕೆಯನ್ನು ನಿಯಂತ್ರಿಸುವ ಮೂಲಕ ಅವುಗಳ ಸರಬರಾಜಿಗೆ ತಡೆ ನೀಡಬೇಕಾಗಿದೆ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಕೀಲರ ಸಂಘದ ಸಹಯೋಗದೊಂದಿಗೆ ಜಿಲ್ಲೆಯ ಪ್ರೌಢಶಾಲೆ ಮತ್ತು ಪಿಯು ಕಾಲೇಜುಗಳಲ್ಲಿ ದುಷ್ಪರಿಣಾಮಗಳ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು. ಇದೇ ವೇಳೆ ಎನ್‌ಡಿಪಿಎಸ್ (NDPS) ಕಾಯ್ದೆಯಡಿ ತನಿಖೆ ನಡೆಸಿ ದೋಷಾರೋಪಣೆ ಪಟ್ಟಿ ಸಲ್ಲಿಸುವಾಗ ಸಣ್ಣ ತಾಂತ್ರಿಕ ಲೋಪಗಳಾದರೂ ಆರೋಪಿಗಳು ಕಾನೂನಿನಿಂದ ಪಾರಾಗುವ ಸಾಧ್ಯತೆಯಿರುತ್ತದೆ. ಆದ್ದರಿಂದ ಪೊಲೀಸ್ ಅಧಿಕಾರಿಗಳು ಕಾಯ್ದೆಯ ತಾಂತ್ರಿಕತೆಗಳನ್ನು ಸರಿಯಾಗಿ ಅರಿತುಕೊಂಡು, ಯಾವುದೇ ಲೋಪಗಳಿಲ್ಲದೆ ಕಟ್ಟುನಿಟ್ಟಿನ ತನಿಖೆ ನಡೆಸಿ ಸೂಕ್ತ ಸಾಕ್ಷ್ಯಾಧಾರಗಳೊಂದಿಗೆ ದೋಷಾರೋಪಣೆ ಪಟ್ಟಿ ಸಲ್ಲಿಸಬೇಕು ಎಂದು ಅವರು ನಿರ್ದೇಶಿಸಿದರು.

ಬೆಳಗಾವಿ ನಗರದಲ್ಲಿ ಗಾಂಜಾ, ಹೆರಾಯಿನ್ ಹಾಗೂ ಕೋಕೇನ್ ಸೇರಿದಂತೆ ವಿವಿಧ ಮಾದಕ ದ್ರವ್ಯ ಜಾಲದ ವಿರುದ್ಧ ಬೆಳಗಾವಿ ನಗರ ಪೊಲೀಸರು ಸಮರ ಸಾರಿದ್ದು, ಮಾದಕ ಪದಾರ್ಥಗಳ ಮಾರಾಟ ಮತ್ತು ಸೇವನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಭೂಷಣ್ ಬೋರಸೆ ತಿಳಿಸಿದ್ದಾರೆ. ಮಹಾರಾಷ್ಟ್ರ, ಮುಂಬೈ, ಈಶಾನ್ಯ ರಾಜ್ಯಗಳು ಮತ್ತು ರಾಜಸ್ಥಾನ ಗಡಿ ಭಾಗಗಳಿಂದ ರಾಜ್ಯಕ್ಕೆ ಅಕ್ರಮವಾಗಿ ಮಾದಕ ದ್ರವ್ಯಗಳು ಸರಬರಾಜಾಗುತ್ತಿದ್ದು, ಇದನ್ನು ತಡೆಯಲು ಕಠಿಣ ಕಾರ್ಯಾಚರಣೆ ನಡೆಸಲಾಗುತ್ತಿದೆ. ಯುವ ಪೀಳಿಗೆಯನ್ನು ಮಾದಕ ವ್ಯಸನದಿಂದ ಮುಕ್ತಗೊಳಿಸಲು ಹಾಗೂ ಈ ಜಾಲಕ್ಕೆ ಕಡಿವಾಣ ಹಾಕಲು ಗೃಹ ಇಲಾಖೆ ವತಿಯಿಂದ ‘ಸನ್ಮಿತ್ರ’ ಎಂಬ ವಿಶೇಷ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದರೊಂದಿಗೆ, ಶಾಲಾ-ಕಾಲೇಜು ಹಂತದಲ್ಲೇ ಅರಿವು ಮೂಡಿಸಲು ಜಿಲ್ಲಾಧಿಕಾರಿಗಳ ಮುಖಾಂತರ ಪ್ರತಿ ಶಿಕ್ಷಣ ಸಂಸ್ಥೆಗಳಲ್ಲಿ ಪೋಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನೊಳಗೊಂಡ ‘ಆಂಟಿ ಡ್ರಗ್ ಕಮಿಟಿ’ ರಚಿಸಲು ಪತ್ರ ಬರೆಯಲಾಗಿದ್ದು, ಮಾದಕ ಪದಾರ್ಥಗಳ ಪರೋಕ್ಷ ಖರೀದಿ ಅಥವಾ ಬಳಕೆ ನಾರ್ಕೋ-ಟೆರರಿಸಂಗೆ ನೆರವಾಗುವ ಅಪಾಯವಿರುವುದರಿಂದ ಪ್ರತಿಯೊಬ್ಬರೂ ಜಾಗೃತರಾಗಿರಬೇಕು ಎಂದು ಅವರು ಕರೆ ನೀಡಿದ್ದಾರೆ.
ಈ ಸಮಾಲೋಚನಾ ಸಭೆಯಲ್ಲಿ ಬೆಳಗಾವಿ ವಕೀಲರ ಸಂಘದ ಅಧ್ಯಕ್ಷರಾದ ಬಿ.ಜೆ. ಗಂಗಾಯಿ, ಜಿಲ್ಲಾ ಆರೋಗ್ಯ ಸಚಿವಾಧಿಕಾರಿ ಐ.ಪಿ. ಗಡಾದ್, ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಉತ್ತರ-ಬೆಳಗಾವಿ ಅಬಕಾರಿ ಇಲಾಖೆಯ ಉಪಆಯುಕ್ತರಾದ ಆರ್.ಎಸ್. ಸಪ್ನ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಎನ್. ಶಿವಕುಮಾರ್ ಸೇರಿದಂತೆ ಹಲವು ಪ್ರಮುಖ ಅಧಿಕಾರಿಗಳು ಭಾಗವಹಿಸಿದ್ದರು.
