Vijaypura

ಪಟ್ಟಣ ಪಂಚಾಯಿತಿ ಅಧ್ಯಕ್ಷನ ಮನೆಯಲ್ಲೇ ಜೂಜಾಟದ ಅಡ್ಡೆ!; ಪೊಲೀಸ್ ದಾಳಿಗೆ ಬಯಲಾಯ್ತು ಇಸ್ಪೀಟ್ ಅಡ್ಡೆ, ಮಾಜಿ ಶಾಸಕ ರಮೇಶ ಭೂಸನೂರ ಕಿಡಿ

Share

ವಿಜಯಪುರ ಜಿಲ್ಲೆಯ ಆಲಮೇಲ ಪಟ್ಟಣದಲ್ಲಿ ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ ಬಂದಿದೆ. ಪಟ್ಟಣ ಪಂಚಾಯಿತಿ ಅಧ್ಯಕ್ಷನ ಮನೆಯಲ್ಲೇ ಅಂದರ್-ಬಾಹರ್ ಇಸ್ಪೀಟ್ ಜೂಜಾಟ ನಡೆಯುತ್ತಿದ್ದ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು, ಅಧ್ಯಕ್ಷ ಸೇರಿದಂತೆ 15 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ದಾಳಿಯಲ್ಲಿ ಸಾವಿರಾರು ರೂಪಾಯಿ ನಗದು ಹಾಗೂ ಮೂರು ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಘಟನೆಗೆ ಮಾಜಿ ಶಾಸಕ ರಮೇಶ ಭೂಸನೂರ ತೀವ್ರ ಆಕ್ರೋಶ ವ್ಯಕ್ತಪಡಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಹೌದು… ವಿಜಯಪುರ ಜಿಲ್ಲೆಯ ಆಲಮೇಲ ಪಟ್ಟಣದ ಸೌದಾಗಾರ ಓಣಿಯಲ್ಲಿರುವ ಪಟ್ಟಣ ಪಂಚಾಯಿತಿ ಅಧ್ಯಕ್ಷ ಮಹಮ್ಮದ ಸಾದಿಕ ಫರೀದಸಾಬ ಸುಂಬಡ ಅವರ ಮನೆಯಲ್ಲಿ ಅಕ್ರಮವಾಗಿ ಇಸ್ಪೀಟ್ ಜೂಜಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪಿಎಸ್‌ಐ ಅರವಿಂದ ಬಿ. ಅಂಗಡಿ ನೇತೃತ್ವದ ಪೊಲೀಸ್ ತಂಡ ದಾಳಿ ನಡೆಸಿತು. ದಾಳಿಯ ವೇಳೆ ಜೂಜಾಟದಲ್ಲಿ ತೊಡಗಿದ್ದ ಹಲವರನ್ನು ವಶಕ್ಕೆ ಪಡೆದು, ₹42,750 ನಗದು ಹಾಗೂ ಮೂರು ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ. ಇನ್ನು ಪ್ರಕರಣದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಮಹಮ್ಮದ ಸಾದಿಕ ಸುಂಬಡ ಸೇರಿದಂತೆ ಒಟ್ಟು 15 ಜನರ ವಿರುದ್ಧ ಆಲಮೇಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 112(2) ಹಾಗೂ ಕರ್ನಾಟಕ ಪೊಲೀಸ್ ಕಾಯ್ದೆಯ ಕಲಂ 79 ಮತ್ತು 80ರ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗಿದೆ. ವಿಶೇಷವೆಂದರೆ, ಆರೋಪಿಗಳ ಪಟ್ಟಿಯಲ್ಲಿ ಅಧ್ಯಕ್ಷರ ಇಬ್ಬರು ಸಹೋದರರೂ ಸೇರಿರುವುದು ಪ್ರಕರಣಕ್ಕೆ ಮತ್ತಷ್ಟು ಗಂಭೀರತೆ ತಂದಿದೆ.

ಇನ್ನೂ ಜನಪ್ರತಿನಿಧಿಯ ಮನೆಯಲ್ಲೇ ಜೂಜಾಟದ ಅಡ್ಡೆ ಪತ್ತೆಯಾಗಿರುವ ಘಟನೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಕಾನೂನನ್ನು ಪಾಲಿಸಬೇಕಾದ ಸ್ಥಾನದಲ್ಲಿರುವ ವ್ಯಕ್ತಿಯ ಮನೆಯಲ್ಲೇ ಇಂತಹ ಅಕ್ರಮ ಚಟುವಟಿಕೆ ನಡೆಯುತ್ತಿರುವುದು ಖಂಡನೀಯ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಮಾಜಿ ಶಾಸಕ ರಮೇಶ ಭೂಸನೂರ ಪ್ರಕರಣವನ್ನು ತೀವ್ರವಾಗಿ ಖಂಡಿಸಿದ್ದು, ತಪ್ಪಿತಸ್ಥರ ವಿರುದ್ಧ ಯಾವುದೇ ಒತ್ತಡಕ್ಕೆ ಮಣಿಯದೆ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಒಟ್ಟಾರೆ ಪಟ್ಟಣ ಪಂಚಾಯಿತಿ ಅಧ್ಯಕ್ಷನ ಮನೆಯಲ್ಲೇ ಜೂಜಾಟದ ಅಡ್ಡೆ ಬಯಲಾಗಿರುವುದು ಆಲಮೇಲ ಪಟ್ಟಣದಲ್ಲಿ ಸಂಚಲನ ಸೃಷ್ಟಿಸಿದೆ. ಪ್ರಕರಣದ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದು, ಈ ಅಕ್ರಮ ಚಟುವಟಿಕೆಯಲ್ಲಿ ಇನ್ನೂ ಯಾರ್ಯಾರ ಪಾತ್ರವಿದೆ ಎಂಬುದರ ಕುರಿತು ಹೆಚ್ಚಿನ ಮಾಹಿತಿ ತನಿಖೆಯಿಂದ ಹೊರಬೀಳಬೇಕಿದೆ.

ವಿಜಯಕುಮಾರ ಸಾರವಾಡ
ಇನ್‌ ನ್ಯೂಜ್
ವಿಜಯಪುರ.

Tags:

error: Content is protected !!