ಮಳೆ ಅಭಾವದಿಂದಾಗಿ ಬಳ್ಳಾರಿಯಲ್ಲಿ ಭೀಕರ ಬರಗಾಲದ ಛಾಯೆ ಆವರಿಸಿದ್ದು, ಹೊಟ್ಟೆಪಾಡಿಗಾಗಿ ಜನ ಊರು ತೊರೆಯುತ್ತಿದ್ದಾರೆ. ಜಿಲ್ಲೆಯ ಬೆಳಗಲ್ ತಾಂಡಾದ ಒಂದೇ ಊರಿನಿಂದ 300ಕ್ಕೂ ಹೆಚ್ಚು ಕುಟುಂಬಗಳು ಬಾಗಿಲು ಹಾಕಿ ಅನ್ಯರಾಜ್ಯ ಹಾಗೂ ನೆರೆಯ ಜಿಲ್ಲೆಗಳಿಗೆ ವಲಸೆ ಹೋಗಿರುವುದು ಆತಂಕ ಮೂಡಿಸಿದೆ.

ಬಳ್ಳಾರಿ ಜಿಲ್ಲೆಯಲ್ಲಿ ಮಳೆಯಿಲ್ಲದೆ ಕೃಷಿ ಸಂಪೂರ್ಣ ನೆಲಕಚ್ಚಿದ್ದು, ಬದುಕಿನ ಬಂಡಿ ಸಾಗಿಸಲು ಜನ ದಾರಿಕಾಣದೆ ತತ್ತರಿಸಿದ್ದಾರೆ. ಕೈಯಲ್ಲಿ ಉದ್ಯೋಗವಿಲ್ಲದೆ, ಮಾಡಿದ ಸಾಲ ತೀರಿಸಲಾಗದೆ ಬೆಳಗಲ್ ತಾಂಡಾದ ನೂರಾರು ಕುಟುಂಬಗಳು ಮಕ್ಕಳು ಮತ್ತು ವೃದ್ಧರನ್ನು ಮನೆಯಲ್ಲೇ ಬಿಟ್ಟು ಬೆಂಗಳೂರು, ಮಂಡ್ಯ, ಆಂಧ್ರ ಹಾಗೂ ಮಹಾರಾಷ್ಟ್ರಕ್ಕೆ ಗೂಳೆ ಹೋಗುತ್ತಿವೆ. ಸ್ಥಳೀಯ ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಸಿಗುತ್ತಿಲ್ಲ, ಇತ್ತ ಗ್ರಾಮೀಣ ಭಾಗದಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಕೂಲಿಯೂ ಕೈಸೇರುತ್ತಿಲ್ಲ. ಸರ್ಕಾರ ನೀಡುವ ಗೃಹಲಕ್ಷ್ಮಿ ಹಾಗೂ ಪಿಂಚಣಿ ಹಣವೂ ಸಮಯಕ್ಕೆ ಸರಿಯಾಗಿ ತಲುಪದಿರುವುದು ಜನರ ಸಂಕಷ್ಟವನ್ನು ಇಮ್ಮಡಿಗೊಳಿಸಿದೆ. 300ಕ್ಕೂ ಅಧಿಕ ಮನೆಗಳು ಬೀಗ ಜಡಿದು ಖಾಲಿ ಖಾಲಿಯಾಗಿದ್ದು, ಸರ್ಕಾರ ತಕ್ಷಣವೇ ಉದ್ಯೋಗದ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ತಾಂಡಾದ ಸಂತ್ರಸ್ತರು ಕಣ್ಣೀರಿಡುತ್ತಾ ಮನವಿ ಮಾಡುತ್ತಿದ್ದಾರೆ.
