ಕೊಟ್ಟ ಮಾತಿನಂತೆ ನಡೆದುಕೊಂಡು ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಮಾದರಿಯಾಗಿದ್ದಾರೆ. ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (SIR) ಕಾರ್ಯವನ್ನು 100% ಯಶಸ್ವಿಯಾಗಿ ಪೂರ್ಣಗೊಳಿಸಿದ ಶಹಾಪೂರದ ಬಸವಾನ ಗಲ್ಲಿಯ ಬಿಎಲ್ಒ ಅವರ ಮನೆಗೆ ಸ್ವತಃ ತೆರಳಿ ಜಿಲ್ಲಾಧಿಕಾರಿಗಳು ಗೌರವಿಸಿ ಸತ್ಕರಿಸಿದ್ದಾರೆ.

ಯಾರು ಮತದಾರರ ಪಟ್ಟಿ ಪರಿಷ್ಕರಣೆ (SIR) ಕಾರ್ಯವನ್ನು 100% ಪೂರ್ಣಗೊಳಿಸುತ್ತಾರೋ ಅವರ ಮನೆಗೆ ಸ್ವತಃ ತೆರಳಿ ಸತ್ಕರಿಸುವುದಾಗಿ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಹಿಂದೆ ಭರವಸೆ ನೀಡಿದ್ದರು. ಅದರಂತೆ ಇಂದು ಶಹಾಪೂರದ ಬಸವಾನ ಗಲ್ಲಿಯಲ್ಲಿರುವ ಬಿಎಲ್ಒ (BLO) ಅವರ ನಿವಾಸಕ್ಕೆ ನೇರವಾಗಿ ತೆರಳಿದ ಜಿಲ್ಲಾಧಿಕಾರಿಗಳು, ಅವರ ಅತ್ಯುತ್ತಮ ಕಾರ್ಯವೈಖರಿಯನ್ನು ಶ್ಲಾಘಿಸಿ ಅವರಿಗೆ ಸನ್ಮಾನ ಮಾಡಿದರು.
ಇದೇ ವಿಷಯವಾಗಿ ಮಾತನಾಡಿದ ಬೆಳಗಾವಿ ಮಹಾನಗರ ಪಾಲಿಕೆಯ ಉಪಆಯುಕ್ತ ಸಿದ್ಧು ಹುಲ್ಲೋಳ್ಳಿ ಅವರು, ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಎಸ್ಐಆರ್ (SIR) ಕಾರ್ಯವು ಅತ್ಯಂತ ಶಿಸ್ತು ಮತ್ತು ವ್ಯವಸ್ಥಿತವಾಗಿ ನಡೆಯುತ್ತಿದ್ದು, ಬಿಎಲ್ಒ ಹಾಗೂ ಸಿಬ್ಬಂದಿಗಳ ಕಾರ್ಯವೈಖರಿಗೆ ಜಿಲ್ಲಾಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು. ಈವರೆಗೆ ಸುಮಾರು 1.60 ಲಕ್ಷ ಮತದಾರರ ವಿವರಗಳನ್ನು ಡಿಜಿಟಲೈಸ್ ಮಾಡಲಾಗಿದ್ದು (ಶೇ. 63ರಷ್ಟು ಪ್ರಗತಿ ಸಾಧನೆ), ಬಾಕಿ ಇರುವ 70,000 ಮತದಾರರ ವಿವರಗಳನ್ನು ಶೀಘ್ರವೇ ಪೂರ್ಣಗೊಳಿಸಲಾಗುವುದು ಎಂದರು. ಇದೇ ವೇಳೆ ಮತದಾರರು ತಮಗೆ ನೀಡಿದ ನಮೂನೆ (ಫಾರ್ಮ್)ಗಳನ್ನು ಸರಿಯಾಗಿ ಭರ್ತಿ ಮಾಡಿ ಅಥವಾ ಮಾಹಿತಿ ತಿಳಿಯದಿದ್ದರೆ ಬಿಎಲ್ಒಗಳಿಗೆ ವಾಪಸ್ ನೀಡಬೇಕು, ಇಲ್ಲದಿದ್ದರೆ ಮತದಾರರ ಪಟ್ಟಿಯಿಂದ ಹೆಸರು ರದ್ದಾಗುವ ಸಾಧ್ಯತೆಯಿದೆ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ನಗರಸೇವಕ ರವಿ ಸಾಳುಂಕೆ ಉಪಸ್ಥಿತರಿದ್ದು, ಬಿಎಲ್ಒ ಅವರ ಶ್ರಮವನ್ನು ಕೊಂಡಾಡಿದರು.
