ಸ್ವಾರ್ಥ ತುಂಬಿದ ಈ ಪ್ರಪಂಚದಲ್ಲಿ ಮಾನವೀಯತೆ ಮತ್ತು ಪ್ರಾಣಿದಯೆ ಇನ್ನು ಜೀವಂತವಾಗಿದೆ ಅನ್ನೋದಕ್ಕೆ ರಾಯಬಾಗ ತಾಲೂಕಿನ ಜೋಡಟ್ಟಿ ಗ್ರಾಮದಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಆಹಾರದ ಹುಡುಕಾಟದಲ್ಲಿದ್ದ ಶ್ವಾನವೊಂದು ಪ್ಲಾಸ್ಟಿಕ್ ಡಬ್ಬಿಯಲ್ಲಿ ತಲೆ ಸಿಲುಕಿಸಿಕೊಂಡು ಸಾವಿನೊಡನೆ ಹೋರಾಡುತ್ತಿತ್ತು. ಕಂಗಾಲಾಗಿ ಓಡಾಡುತ್ತಿದ್ದ ಈ ಮೂಕಪ್ರಾಣಿಯನ್ನ ಕಂಡ ಸ್ಥಳೀಯ ಯುವಕರು ಮಾಡಿದ್ದೇನು ಇಲ್ಲಿದೆ ನೋಡಿ ಒಂದು ಕಂಪ್ಲೀಟ್ ರಿಪೋರ್ಟ್!

ಚಿಕ್ಕೋಡಿ ಉಪವಿಭಾಗದ ರಾಯಬಾಗ ತಾಲೂಕಿನ ಜೋಡಟ್ಟಿ ಗ್ರಾಮದ ಬೀದಿಯಲ್ಲಿ ಆಹಾರ ಹುಡುಕಿಕೊಂಡು ಬಂದ ಶ್ವಾನವೊಂದಕ್ಕೆ ದಿಢೀರ್ ಆಪತ್ತು ಎದುರಾಗಿತ್ತು. ಅಜಾಗರೂಕತೆಯಿಂದ ಪ್ಲಾಸ್ಟಿಕ್ ಡಬ್ಬಿಯೊಳಗೆ ತಲೆ ಹಾಕಿದ್ದ ಈ ಶ್ವಾನ, ತಲೆಯನ್ನು ಹೊರಗೆ ತೆಗೆಯಲಾಗದೆ ಪರದಾಡುತ್ತಿತ್ತು. ಉಸಿರಾಟಕ್ಕೂ ತೊಂದರೆಯಾಗಿ, ದಿಕ್ಕು ತೋಚದೆ ಭಯದಿಂದ ರಸ್ತೆಯುದ್ದಕ್ಕೂ ಓಡಾಡುತ್ತಾ ಕರುಣಾಜನಕ ಸ್ಥಿತಿಯಲ್ಲಿತ್ತು.
ಶ್ವಾನದ ಈ ನರಕಯಾತನೆಯನ್ನು ಗಮನಿಸಿದ ಸ್ಥಳೀಯ ಯುವಕ ಗಿರೀಶ್ ಪಾಟೀಲ ಹಾಗೂ ಅವರ ಸ್ನೇಹಿತರ ಬಳಗ ತಕ್ಷಣವೇ ಸ್ಪಂದಿಸಿದರು. ಭಯದಿಂದ ಓಡುತ್ತಿದ್ದ ಶ್ವಾನವನ್ನು ಅತ್ಯಂತ ಜಾಗರೂಕತೆಯಿಂದ ಹಿಡಿದ ಯುವಕರು, ಶ್ರಮವಹಿಸಿ ಅದರ ತಲೆಗೆ ಸಿಲುಕಿದ್ದ ಪ್ಲಾಸ್ಟಿಕ್ ಡಬ್ಬಿಯನ್ನು ತೆರವುಗೊಳಿಸಿದರು. ಸಮಯಕ್ಕೆ ಸರಿಯಾಗಿ ಯುವಕರು ಸ್ಪಂದಿಸಿದ್ದರಿಂದ ಶ್ವಾನಕ್ಕೆ ಯಾವುದೇ ಹಾನಿಯಾಗದೇ ನವಜೀವನ ಸಿಕ್ಕಂತಾಗಿದೆ.
ಇತ್ತೀಚೆಗೆ ರಸ್ತೆಯಲ್ಲಿ ವಾಹನ ಸವಾರರು ಮೂಕ ಪ್ರಾಣಿಗಳ ಮೇಲೆ ದಯೆ ತೋರದೆ ಬೇಜವಾಬ್ದಾರಿಯಿಂದ ಚಲಾಯಿಸಿ ಜೀವ ತೆಗಿತಾರೆ. ಆದರೆ ನಮ್ಮ ಜೋಡಟ್ಟಿ ಗ್ರಾಮದ ಗಿರೀಶ್ ಪಾಟೀಲ್ ಮತ್ತು ಯುವಕರು ಈ ಶ್ವಾನದ ಪ್ರಾಣ ಉಳಿಸಿ ನಿಜವಾದ ಮಾನವೀಯತೆ ಮೆರೆದಿದ್ದಾರೆ. ಇವರಿಂದ ಎಲ್ಲರೂ ಕಲಿಯೋದು ಸಾಕಷ್ಟಿದೆ.
ಇತ್ತೀಚಿನ ದಿನಗಳಲ್ಲಿ ರಸ್ತೆಗಳಲ್ಲಿ ಮೂಕಪ್ರಾಣಿಗಳ ಮೇಲೆ ವಾಹನ ಹರಿಸಿ ಕೊಲ್ಲುವ ಕ್ರೂರಿಗಳ ನಡುವೆ, ಜೋಡಟ್ಟಿ ಗ್ರಾಮದ ಯುವಕರ ಈ ಸಾಹಸಿಕ ಹಾಗೂ ಮಾನವೀಯ ಕಾರ್ಯಕ್ಕೆ ಇಡೀ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಡಿ.ಕೆ.ಉಪ್ಪಾರ ಇನ್ ನ್ಯೂಸ್ ಚಿಕ್ಕೋಡಿ.
