Belagavi

ವಡಗಾಂವ: ಶ್ರೀ ಮಂಗಾಯಿ ದೇವಿ ಜಾತ್ರೆಯಲ್ಲಿ ‘ಬರಗಾಲದ ವಾಸ್ತವ’ ಮತ್ತು ‘ಪಂಡರಪುರ ವಾರಿ’ಯ ಕಲಾತ್ಮಕ ಸೃಷ್ಟಿ!

Share

ವಡಗಾಂವದ ಗ್ರಾಮದೇವತೆ ಶ್ರೀ ಮಂಗಾಯಿ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರದ ದಿನದಂದು ದೇವಿಯ ಎದುರು ಪ್ರಸ್ತುತ ರಾಜ್ಯದಲ್ಲಿ ಎದುರಾಗಿರುವ ಬರಗಾಲದ ವಾಸ್ತವ ಚಿತ್ರಣ ಹಾಗೂ ಆಷಾಢ ಏಕಾದಶಿಯ ಪಂಡರಪುರ ವಾರಿಯ ಆಕರ್ಷಕ ಅಲಂಕಾರವನ್ನು ಪ್ರದರ್ಶಿಸಲಾಯಿತು. ಈ ಅನನ್ಯ ಅಲಂಕಾರ ಹಾಗೂ ದೇವಿಯ ದರ್ಶನಕ್ಕಾಗಿ ಬೆಳಿಗ್ಗೆಯಿಂದಲೇ ಸಾವಿರಾರು ಭಕ್ತರು ಸಾಲುಗಟ್ಟಿ ನಿಂತು ಪ್ರಾರ್ಥನೆ ಸಲ್ಲಿಸಿದರು.

ಈ ಬಾರಿ ಮಳೆಯಾಗದೆ ರೈತರು ಎದುರಿಸುತ್ತಿರುವ ಬರಗಾಲದ ಭೀಕರ ಪರಿಸ್ಥಿತಿಯನ್ನು ಈ ಕಲಾತ್ಮಕ ಅಲಂಕಾರದ ಮೂಲಕ ಪ್ರಭಾವಶಾಲಿಯಾಗಿ ಬಿಂಬಿಸಲಾಗಿದೆ. ಪ್ರಕೃತಿಯನ್ನೇ ನೆಚ್ಚಿಕೊಂಡಿರುವ ಕೃಷಿಕರ ವೇದನೆ ಹಾಗೂ ಇಂದಿನ ಕೃಷಿಯ ನೈಜ ಸ್ಥಿತಿಯನ್ನು ಭಕ್ತರ ಮುಂದೆ ತೆರೆದಿಡಲಾಗಿದೆ. ಇದರ ಜೊತೆಗೆ ಶನಿವಾರ ಬರಲಿರುವ ಆಷಾಢ ಏಕಾದಶಿಯ ಹಿನ್ನೆಲೆಯಲ್ಲಿ ವಿಠಲ-ರುಕ್ಮಿಣಿ, ವಾರಕರಿಗಳು ಹಾಗೂ ಪಂಡರಪುರ ವಾರಿಯ ಭಕ್ತಿಪೂರ್ವಕ ದೃಶ್ಯಾವಳಿಯನ್ನು ದೇವಿಯ ಸನ್ನಿಧಿಯಲ್ಲಿ ನಿರ್ಮಿಸಲಾಗಿದ್ದು, ಬರಗಾಲದ ವಾಸ್ತವ ಹಾಗೂ ಭಕ್ತಿಯ ಸಂದೇಶಗಳ ಸುಂದರ ಸಂಗಮ ಅಲ್ಲಿ ಕಂಡುಬಂತು.

ಮಂಗಳವಾರವನ್ನು ಶ್ರೀ ಮಂಗಾಯಿ ದೇವಿಯ ವಿಶೇಷ ದಿನವೆಂದು ಪರಿಗಣಿಸಲಾಗುತ್ತಿದ್ದು, ದೇವಸ್ಥಾನದಲ್ಲಿ ಬೆಳಗಿನಿಂದಲೇ ಭಕ್ತರ ದಂಡು ಹರಿದುಬಂದಿತ್ತು. ದೇವಿಯ ದರ್ಶನ ಪಡೆದ ಭಕ್ತಾದಿಗಳು ರಾಜ್ಯದಲ್ಲಿ ಶೀಘ್ರದಲ್ಲೇ ಉತ್ತಮ ಮಳೆಯಾಗಿ ರೈತರ ಮೇಲಿರುವ ಸಂಕಷ್ಟ ದೂರವಾಗಲಿ, ಎಲ್ಲೆಡೆ ಸುಖ-ಸಮೃದ್ಧಿ ನೆಲೆಸಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಇನ್ನು ಜಾತ್ರೆಯ ಅಂಗವಾಗಿ ಆಯೋಜಿಸಲಾದ ವಿವಿಧ ಕಾರ್ಯಕ್ರಮಗಳು ಹಾಗೂ ದೇವಿಯ ಅಲಂಕಾರದ ಕುರಿತು ವಿನಾಯಕ ಚವ್ಹಾಣ್ ಪಾಟೀಲ್ ಮಾಹಿತಿ ನೀಡಿದ್ದು, ಪ್ರತಿವರ್ಷದಂತೆ ಈ ಬಾರಿಯೂ ಮಂಗಾಯಿ ದೇವಿಯ ಜಾತ್ರೆ ಅತ್ಯಂತ ಶ್ರದ್ಧಾ-ಭಕ್ತಿಯಿಂದ ಜರುಗುತ್ತಿದೆ ಎಂದು ತಿಳಿಸಿದರು.

Tags:

error: Content is protected !!