ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಮಾಹಿತಿಯನ್ನು ನವೀಕರಿಸುವ ಹಾಗೂ ಅರ್ಹ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯ ನಿರಂತರವಾಗಿ ದೊರೆಯುವಂತೆ ಮಾಡಲು ಕೈಗೊಂಡಿರುವ ಗೃಹ ಜ್ಯೋತಿ ಮರುಪರಿಶೀಲನಾ ಅಭಿಯಾನಕ್ಕೆ ಬುಧವಾರ ನಗರದ ಆಶ್ರಯ ಕಾಲೋನಿಯಲ್ಲಿ ಚಾಲನೆ ನೀಡಲಾಯಿತು.


ಪಾಲಿಕೆ ನಾಮನಿರ್ದೇಶಿತ ಸದಸ್ಯ ಮುಸ್ತಾಕ್ ಮುಲ್ಲಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅಭಿಯಾನದ ಮಹತ್ವವನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಸ್ತಾಕ್ ಮುಲ್ಲಾ, ಸರ್ಕಾರದ ನಿರ್ದೇಶನದಂತೆ ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಮಾಹಿತಿಯನ್ನು ಮರುಪರಿಶೀಲನೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹೆಸ್ಕಾಂ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ಮತದಾರರ ಗುರುತಿನ ಚೀಟಿ, ವಿದ್ಯುತ್ ಬಿಲ್, ಭಾವಚಿತ್ರ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ ಸ್ಥಳದಲ್ಲೇ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಲಿದ್ದಾರೆ ಎಂದು ತಿಳಿಸಿದರು.

ಯೋಜನೆಯ ಸೌಲಭ್ಯ ಪಡೆಯುತ್ತಿರುವ ಫಲಾನುಭವಿಗಳು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಹೆಸ್ಕಾಂ ಸಿಬ್ಬಂದಿ ಅಧಿಕೃತ ಗುರುತಿನ ಚೀಟಿಯೊಂದಿಗೆ ಮನೆಗಳಿಗೆ ಭೇಟಿ ನೀಡಲಿದ್ದು, ಅವರು ಕೇಳುವ ದಾಖಲೆಗಳನ್ನು ನೀಡುವ ಮೂಲಕ ಸಾರ್ವಜನಿಕರು ಸಹಕರಿಸಬೇಕು. ತಪ್ಪು ಮಾಹಿತಿ ನೀಡುವುದರಿಂದ ಅಥವಾ ದಾಖಲೆ ಸಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ಯೋಜನೆಯ ಸೌಲಭ್ಯ ಪಡೆಯುವಲ್ಲಿ ತೊಂದರೆ ಉಂಟಾಗುವ ಸಾಧ್ಯತೆ ಇರುವುದರಿಂದ ಪ್ರತಿಯೊಬ್ಬರೂ ಅಗತ್ಯ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ಹೆಸ್ಕಾಂ ಅಧಿಕಾರಿಯಾದ ಡಿ.ವಿ. ಹಂದಿಗುಂದಿ ಮಾತನಾಡಿ, ಸರ್ಕಾರದ ಸೂಚನೆಯಂತೆ ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ದಾಖಲೆಗಳ ಪರಿಶೀಲನೆ ಹಾಗೂ ನವೀಕರಣ ಕಾರ್ಯ ನಡೆಯುತ್ತಿದೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸೂಚನೆ ಮೇರೆಗೆ ಹೆಸ್ಕಾಂ ಸಿಬ್ಬಂದಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಮನೆ ಮನೆಗೆ ತೆರಳಿ ದಾಖಲೆ ಸಂಗ್ರಹಿಸುತ್ತಿದ್ದಾರೆ. ಯೋಜನೆಯು ನಿಜವಾದ ಅರ್ಹ ಫಲಾನುಭವಿಗಳಿಗೆ ತಲುಪುವ ಉದ್ದೇಶದಿಂದ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಈ ಪರಿಶೀಲನಾ ಪ್ರಕ್ರಿಯೆಯಲ್ಲಿ ಫಲಾನುಭವಿಗಳು ತಮ್ಮ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಇತ್ತೀಚಿನ ವಿದ್ಯುತ್ ಬಿಲ್ ಹಾಗೂ ಅಗತ್ಯವಿರುವ ಇತರೆ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಂಡು ಸಿಬ್ಬಂದಿಗೆ ನೀಡಬೇಕು. ನೋಂದಣಿ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಲು ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ ಎಂದು ಅವರು ಹೇಳಿದರು.
ಗೃಹ ಜ್ಯೋತಿ ಯೋಜನೆಯಡಿ ನಿಗದಿತ ಮಿತಿಯೊಳಗೆ ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿರುವ ಸಾವಿರಾರು ಕುಟುಂಬಗಳ ಮಾಹಿತಿಯನ್ನು ಪರಿಶೀಲಿಸಿ ದಾಖಲೆಗಳನ್ನು ನವೀಕರಿಸುವ ಕಾರ್ಯ ಮುಂದಿನ ದಿನಗಳಲ್ಲೂ ಹಂತ ಹಂತವಾಗಿ ಮುಂದುವರಿಯಲಿದ್ದು, ಎಲ್ಲ ಫಲಾನುಭವಿಗಳು ಹೆಸ್ಕಾಂ ಸಿಬ್ಬಂದಿಗೆ ಸಂಪೂರ್ಣ ಸಹಕಾರ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸಂಗೀತಾ ತಂಗಡಿ, ಕಲ್ಲಪ್ಪ, ಸೈಯಿದಾ ಸೇರಿದಂತೆ ಸ್ಥಳೀಯ ಮುಖಂಡರು, ಹೆಸ್ಕಾಂ ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
