bellari

ಬಳ್ಳಾರಿ ನಬೀ ರಸೂಲ್ ಕೊಲೆ ಕೇಸ್‌ಗೆ ಬಿಗ್ ಟ್ವಿಸ್ಟ್: ಪಾರ್ಟಿಯಲ್ಲಿ ತಾಯಿಗೆ ಬೈದಿದ್ದಕ್ಕೆ ಸ್ನೇಹಿತರಿಂದಲೇ ನವವರನ ಬರ್ಬರ ಹತ್ಯೆ!*

Share

“ಬಳ್ಳಾರಿಯಲ್ಲಿ ಇತ್ತೀಚೆಗೆ ನಡೆದಿದ್ದ ನವವಿವಾಹಿತ ನಬೀ ರಸೂಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಯುವತಿಯ ಕುಟುಂಬಸ್ಥರೇ ಈ ಕೊಲೆ ಮಾಡಿದ್ದಾರೆ ಎಂಬ ಅನುಮಾನದ ನಡುವೆ, ಕೌಲ್ ಬಜಾರ್ ಪೊಲೀಸರು ಕಾರ್ಯಾಚರಣೆ ನಡೆಸಿ ನಬೀ ರಸೂಲನ್‌ನ ನಿಕಟ ಸ್ನೇಹಿತರನ್ನೇ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.”

ಗಣಿ ನಗರಿ ಬಳ್ಳಾರಿಯ ಬಟ್ಟಿ ಏರಿಯಾದ ಕೆರೆ ಪಕ್ಕದಲ್ಲಿ ಜುಲೈ 16 ರಂದು ನಡೆದಿದ್ದ 21 ವರ್ಷದ ನಬೀ ರಸೂಲ್ ಕೊಲೆ ಪ್ರಕರಣವನ್ನು ಕೌಲ್ ಬಜಾರ್ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಮಟನ್ ಕತ್ತರಿಸುವ ಕೆಲಸ ಮಾಡುತ್ತಿದ್ದ ನಬೀ ರಸೂಲ್, ತಮ್ಮ ಮದುವೆಯ ರಿಸೆಪ್ಷನ್ ಮುಗಿದ ಕೆಲವೇ ಗಂಟೆಗಳಲ್ಲಿ ಗೆಳೆಯರಿಗೆ ಪಾರ್ಟಿ ನೀಡಿದ್ದ. ಈ ಪಾರ್ಟಿಯ ಸಂದರ್ಭದಲ್ಲಿ ನಬೀ ರಸೂಲ್ ಹಾಗೂ ಆತನ ಸ್ನೇಹಿತ ಕಾನೂನು ಸಂಘರ್ಷಕ್ಕೊಳಗಾದ ಅಪ್ರಾಪ್ತ ಬಾಲಕನ ನಡುವೆ ಕ್ಷುಲ್ಲಕ ಕಾರಣಕ್ಕೆ ತೀವ್ರ ಗಲಾಟೆ ನಡೆದಿದೆ. ಮಾತಿಗೆ ಮಾತು ಬೆಳೆದು ನಬೀ ರಸೂಲ್ ಆ ಬಾಲಕನ ತಾಯಿಗೆ ಅಸಭ್ಯವಾಗಿ ಬೈದಿದ್ದು, ಇದರಿಂದ ಆಕ್ರೋಶಗೊಂಡ ಬಾಲಕ ಹಾಗೂ ಆತನ ಜೊತೆಯಲ್ಲಿದ್ದವರು ಕೊಲೆಗೆ ಸಂಚು ರೂಪಿಸಿದ್ದಾರೆ.

ನಬೀ ರಸೂಲ್ ತನ್ನ ಭದ್ರತೆಗಾಗಿ ಜೊತೆಯಲ್ಲಿ ಇಟ್ಟುಕೊಂಡು ಓಡಾಡುತ್ತಿದ್ದ ಚಾಕುವನ್ನೇ ಕಸಿದುಕೊಂಡ ಅಪ್ರಾಪ್ತ ಬಾಲಕ, ಆತನಿಗೆ ಮನಬಂದಂತೆ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಘಟನೆ ಬಳಿಕ ತಾಂತ್ರಿಕ ಸಾಕ್ಷ್ಯ ಹಾಗೂ ಟವರ್ ಲೋಕೇಶನ್ ಆಧರಿಸಿ ಕಾರ್ಯಾಚರಣೆ ನಡೆಸಿದ ಕೌಲ್ ಬಜಾರ್ ಪೊಲೀಸರು, ಕೊಲೆಗೆ ಸಹಕರಿಸಿದ ಕಾನೂನು ಸಂಘರ್ಷಕ್ಕೊಳಗಾದ ಬಾಲಕ, ತಾಹೀರ ಅಲಿಯಾಸ್ ಹೀನಾ (ಮಂಗಳಮುಖಿ) ಹಾಗೂ ಸಮೀರ್ ಎಂಬ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಘಟನೆಯಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಆರೋಪಿ ಸಲ್ಮಾನ್ ಎಂಬಾತ ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Tags:

error: Content is protected !!