Vijaypura

ಆಲಮಟ್ಟಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು; ಇಂದು ಬೆಳಗ್ಗೆ 10ರಿಂದ ನದಿಗೆ 25 ಸಾವಿರ ಕ್ಯೂಸೆಕ್ ನೀರು ಬಿಡುಗಡೆ

Share

ಮಹಾರಾಷ್ಟ್ರ ಸೇರಿದಂತೆ ಮೇಲ್ದಂಡೆ ಪ್ರದೇಶಗಳಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಹೆಚ್ಚುತ್ತಿದ್ದು, ಜಲಾಶಯದಿಂದ ಕೃಷ್ಣಾ ನದಿಗೆ ನೀರಿನ ಹೊರಹರಿವನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ.

ಬುಧವಾರ ಬೆಳಿಗ್ಗೆ 8 ಗಂಟೆಯ ಮಾಹಿತಿ ಪ್ರಕಾರ, ಆಲಮಟ್ಟಿ ಜಲಾಶಯದ ನೀರಿನ ಮಟ್ಟ 518.25 ಮೀಟರ್ ಇದ್ದು, ಒಟ್ಟು ಸಂಗ್ರಹ 101.374 ಟಿಎಂಸಿ ಹಾಗೂ ಜೀವಂತ ಸಂಗ್ರಹ 83.754 ಟಿಎಂಸಿ ದಾಖಲಾಗಿದೆ. ಜಲಾಶಯಕ್ಕೆ ಸರಾಸರಿ 63,792 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಪ್ರಸ್ತುತ ಜಲಾಶಯದಿಂದ ಕೃಷ್ಣಾ ನದಿಗೆ 12,500 ಕ್ಯೂಸೆಕ್ ನೀರನ್ನು ಕೆಪಿಸಿಎಲ್ ಮೂಲಕ ಬಿಡುಗಡೆ ಮಾಡಲಾಗುತ್ತಿದ್ದು, ಟ್ಯಾಂಕ್ ತುಂಬಿಸಲು 3,471 ಕ್ಯೂಸೆಕ್ ಹಾಗೂ ಕುಡಿಯುವ ನೀರು, ಆವಿಯಾಗುವಿಕೆ ಸೇರಿ 402 ಕ್ಯೂಸೆಕ್ ಬಳಸಲಾಗುತ್ತಿದೆ. ಒಟ್ಟು ಹೊರಹರಿವು 16,373 ಕ್ಯೂಸೆಕ್ ಆಗಿದೆ. ಮೇಲ್ದಂಡೆ ಪ್ರದೇಶಗಳಲ್ಲಿ ಮಳೆ ಮುಂದುವರಿದಿರುವುದು ಹಾಗೂ ಅಲ್ಲಿನ ಜಲಾಶಯಗಳಿಂದ ಹೆಚ್ಚುವರಿ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ, ಇಂದು ಬೆಳಿಗ್ಗೆ 10 ಗಂಟೆಯಿಂದ ಕೃಷ್ಣಾ ನದಿಗೆ ನೀರಿನ ಹೊರಹರಿವನ್ನು ಹಂತ ಹಂತವಾಗಿ 12,500 ಕ್ಯೂಸೆಕ್‌ನಿಂದ 25,000 ಕ್ಯೂಸೆಕ್‌ಗೆ ಹೆಚ್ಚಿಸಲಾಗುವುದು ಎಂದು ಆಲಮಟ್ಟಿ ಅಣೆಕಟ್ಟು ಅಧಿಕಾರಿಗಳು ಎಚ್ಚರಿಕೆ ಸಂದೇಶದಲ್ಲಿ ತಿಳಿಸಿದ್ದಾರೆ. ಆದ್ದರಿಂದ ಆಲಮಟ್ಟಿ ಅಣೆಕಟ್ಟಿನ ಕೆಳಭಾಗದ ನದಿ ಪಾತ್ರದಲ್ಲಿರುವ ಸಾರ್ವಜನಿಕರು, ರೈತರು ಹಾಗೂ ಸಂಬಂಧಿತ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸುವಂತೆ ಮನವಿ ಮಾಡಲಾಗಿದೆ. ನದಿ ಪಾತ್ರದಲ್ಲಿ ಅನಗತ್ಯವಾಗಿ ಓಡಾಡದಂತೆ ಹಾಗೂ ಜಾನುವಾರುಗಳನ್ನು ನದಿಯ ಸಮೀಪಕ್ಕೆ ಕರೆದೊಯ್ಯದೇ ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ.

Tags:

error: Content is protected !!