ಜಾಗದ ವಿವಾದದ ಹಿನ್ನೆಲೆ ಎರಡು ಸಂಬಂಧಿಕ ಕುಟುಂಬಗಳ ನಡುವೆ ಘರ್ಷಣೆ ನಡೆದಿದ್ದು, ವ್ಯಕ್ತಿಯೊಬ್ಬರನ್ನು ಕೈಕಾಲು ಕಟ್ಟಿ ಹಲ್ಲೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಗೆ ಸಂಬಂಧಿಸಿ ಎರಡೂ ಕಡೆಯವರು ಪರಸ್ಪರ ದೂರು ದಾಖಲಿಸಿದ್ದು, ಇಬ್ಬರು ಗಾಯಾಳುಗಳು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತ ವರದಿ ಇಲ್ಲಿದೆ.

ಹೌದು.. ವಿಜಯಪುರ ತಾಲೂಕಿನ ಅಂಕಲಗಿ ಗ್ರಾಮದಲ್ಲಿ ಶಿವಪ್ಪ ಹೂಗಾರ್ ಎಂಬುವರ ಮೇಲೆ ಹಲ್ಲೆ ನಡೆಸಿರುವ ದೃಶ್ಯಗಳು ವೈರಲ್ ಆಗಿವೆ. ಜಾಗದಲ್ಲಿ ಹಾಕಿದ್ದ ಅಂಗಡಿ ತೆರವುಗೊಳಿಸುವ ವಿಚಾರಕ್ಕೆ ಸಂಬಂಧಿಕರ ನಡುವೆ ಮಾತಿನ ಚಕಮಕಿ ನಡೆದಿದ್ದು, ಅದು ಬಳಿಕ ಹಲ್ಲೆಗೆ ತಿರುಗಿದೆ ಎನ್ನಲಾಗಿದೆ. ಶಿವಪ್ಪ ಅವರ ಪತ್ನಿಯ ಆರೋಪದ ಪ್ರಕಾರ, ಸಂಬಂಧಿಗಳಾದ ಅನೀಲ್, ಸುನೀಲ್ ಹಾಗೂ ಬೋರವ್ವ ಮನೆಗೆ ಬಂದು ಶಿವಪ್ಪ ಅವರ ಕೈಕಾಲು ಕಟ್ಟಿ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ.
ಇನ್ನೊಂದೆಡೆ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿ ಹಾಕಿರುವ ಎದುರುಪಕ್ಷ, ಶಿವಪ್ಪ ಅವರು ನಿತ್ಯ ಮದ್ಯಪಾನ ಮಾಡಿ ತಮ್ಮ ಸಹೋದರಿಯೊಂದಿಗೆ ಗಲಾಟೆ ಮಾಡುತ್ತಿದ್ದರು. ಇದೇ ವಿಚಾರವನ್ನು ಪ್ರಶ್ನಿಸಲು ಹೋದಾಗ ನಮ್ಮ ಮೇಲೆಯೇ ಹಲ್ಲೆ ನಡೆಸಿದ್ದಾರೆ ಎಂದು ಪ್ರತಿದೂರು ನೀಡಿದ್ದಾರೆ. ಈ ಘಟನೆಯಲ್ಲಿ ಸುನೀಲ್ ಅವರಿಗೂ ಗಾಯಗಳಾಗಿದ್ದು, ಅವರು ಸಹ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಒಟ್ಟಾರೆ, ಕಳೆದ ಹಲವು ವರ್ಷಗಳಿಂದ ಎರಡು ಕುಟುಂಬಗಳ ನಡುವೆ ವೈಮನಸ್ಸು ಮುಂದುವರಿದಿದ್ದು, ನಿನ್ನೆ ನಡೆದ ಘಟನೆ ಹಿಂಸಾತ್ಮಕ ರೂಪ ಪಡೆದುಕೊಂಡಿದೆ. ಪ್ರಕರಣ ಸಂಬಂಧ ಎರಡೂ ಕಡೆಯ ದೂರುಗಳನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದು, ತನಿಖೆಯ ಬಳಿಕ ಘಟನೆಯ ನಿಖರ ಸತ್ಯಾಂಶ ಬೆಳಕಿಗೆ ಬರಲಿದೆ.
ವಿಜಯಕುಮಾರ ಸಾರವಾಡ,
ಇನ್ ನ್ಯೂಜ್,
ವಿಜಯಪುರ.
