Chikkodi

ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ನೇತೃತ್ವದ ಹೋರಾಟಕ್ಕೆ ಮಣಿದ ಅಧಿಕಾರಿಗಳು: ಮುಳವಾಡ ಏತ ನೀರಾವರಿ ಕಾಲುವೆಗಳಿಗೆ ನೀರು ಬಿಡುಗಡೆ ರೈತರ ಪ್ರತಿಭಟನೆ ಫಲಶ್ರುತಿ; ಕಾಲುವೆಗಳಿಗೆ ನೀರು ಹರಿದ ಹಿನ್ನೆಲೆ ರೈತರಲ್ಲಿ ಹರ್ಷ, ಸರ್ಕಾರದ ವಿರುದ್ಧ ಮಾಜಿ ಸಚಿವರ ವಾಗ್ದಾಳಿ

Share

ವಿಜಯಪುರ ಹಾಗೂ ಬಾಗಲಕೋಟೆ ಅವಳಿ ಜಿಲ್ಲೆಯ ಏತ ನೀರಾವರಿ ಯೋಜನೆಗಳಿಗೆ ನೀರು ಹರಿಸದಿರುವುದನ್ನು ಖಂಡಿಸಿ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ನೇತೃತ್ವದಲ್ಲಿ ಕೋಲ್ಹಾರ ತಾಲ್ಲೂಕಿನ ಮಟ್ಟಿಹಾಳದ ಕೃಷ್ಣ ಭಾಗ್ಯ ಜಲ ನಿಗಮ ಕಚೇರಿ ಎದುರು ರೈತರು ಪ್ರತಿಭಟನೆ ನಡೆಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯ ಒತ್ತಡಕ್ಕೆ ಮಣಿದ ಅಧಿಕಾರಿಗಳು ಮುಳವಾಡ ಏತ ನೀರಾವರಿ ಯೋಜನೆಯ ಕಾಲುವೆಗಳಿಗೆ ನೀರು ಹರಿಸಿದ್ದು, ರೈತರಲ್ಲಿ ಸಂತಸ ಮೂಡಿಸಿತು.

ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ಮುಂಗಾರು ಮಳೆ ಕೊರತೆಯಿಂದ ರೈತರು, ಜನರು ಹಾಗೂ ಜಾನುವಾರುಗಳು ತೀವ್ರ ಸಂಕಷ್ಟ ಎದುರಿಸುತ್ತಿದ್ದು, ರೈತರ ಹಿತ ಕಾಪಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು. ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಏತ ನೀರಾವರಿ ಯೋಜನೆಗಳಿಗೆ ತಕ್ಷಣ ನೀರು ಹರಿಸಬೇಕೆಂದು ಒತ್ತಾಯಿಸಿದರು.


ಅಲಮಟ್ಟಿ ಜಲಾಶಯ ನಿರ್ಮಾಣಕ್ಕಾಗಿ ಈ ಭಾಗದ ರೈತರು ಭೂಮಿ ಹಾಗೂ ಮನೆ ಕಳೆದುಕೊಂಡಿರುವುದರಿಂದ ಅವಳಿ ಜಿಲ್ಲೆಯ ಏತ ನೀರಾವರಿ ಯೋಜನೆಗಳನ್ನು ನೀರು ನಿರ್ವಹಣಾ ಸಲಹಾ ಸಮಿತಿ (ಐಸಿಸಿ) ವ್ಯಾಪ್ತಿಗೆ ಒಳಪಡಿಸದೇ, ಜಲಾಶಯಕ್ಕೆ ಮಹಾಪೂರ ಬಂದ ತಕ್ಷಣವೇ ನೀರು ಬಿಡುಗಡೆ ಮಾಡುವ ಶಾಶ್ವತ ವ್ಯವಸ್ಥೆ ಜಾರಿಗೊಳಿಸಬೇಕೆಂದು ಆಗ್ರಹಿಸಿದರು. ರೈತ ಮುಖಂಡ ಟಿ.ಟಿ. ಹಗೇದಾಳ ಮಾತನಾಡಿ, ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಬೆಳೆಗಳು ನೀರಿನ ಕೊರತೆಯಿಂದ ಒಣಗುವ ಹಂತ ತಲುಪಿದ್ದು, ಕುಡಿಯುವ ನೀರಿನ ಸಮಸ್ಯೆಯೂ ತೀವ್ರವಾಗಿದೆ. ಅಲಮಟ್ಟಿ ಜಲಾಶಯದಲ್ಲಿ ಸಾಕಷ್ಟು ನೀರಿನ ಸಂಗ್ರಹವಿರುವ ಹಿನ್ನೆಲೆಯಲ್ಲಿ ಮುಳವಾಡ ಏತ ನೀರಾವರಿ ಯೋಜನೆಯ ಎಲ್ಲಾ ಕಾಲುವೆಗಳಿಗೆ ಕೂಡಲೇ ನೀರು ಹರಿಸಬೇಕೆಂದು ಒತ್ತಾಯಿಸಿದರು. ಪ್ರತಿಭಟನೆ ವೇಳೆ ಅಧಿಕಾರಿಗಳು ಮೇಲಾಧಿಕಾರಿಗಳೊಂದಿಗೆ ನಿರಂತರ ಚರ್ಚೆ ನಡೆಸಿ ಸ್ವಲ್ಪ ಸಮಯಾವಕಾಶ ಕೋರಿದರು. ಆದರೆ “ಇಂದೇ ನೀರು ಹರಿಸಬೇಕು” ಎಂದು ಬೆಳ್ಳುಬ್ಬಿ ಹಾಗೂ ರೈತರು ಪಟ್ಟು ಹಿಡಿದರು.

ಅಂತಿಮವಾಗಿ ಅಧಿಕಾರಿಗಳು ಕಾಲುವೆಗಳಿಗೆ ನೀರು ಬಿಡುಗಡೆ ಮಾಡಿದರು. ಕಾಲುವೆಯಲ್ಲಿ ನೀರು ಹರಿಯತೊಡಗುತ್ತಿದ್ದಂತೆ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಹಾಗೂ ರೈತರು ಹರ್ಷ ವ್ಯಕ್ತಪಡಿಸಿದರು. ಪ್ರತಿಭಟನೆ ಯಲ್ಲಿ ದಿಗಂಬರೇಶ್ವರ ಮಠದ ಕಲ್ಲಿನಾಥ ದೇವರು, ಶೀಲವಂತ ಹಿರೇಮಠದ ಪರಮಪೂಜ್ಯ ಡಾ. ಕೈಲಾಸನಾಥ ಶ್ರೀಗಳು, ಬಿಜೆಪಿ ಜಿಲ್ಲಾಧ್ಯಕ್ಷ ಗುರಲಿಂಗಪ್ಪ (ಜಿ.ಡಿ.) ಅಂಗಡಿ, ರೈತ ಮುಖಂಡ ನಂದಬಸಪ್ಪ ಚೌಧರಿ, ವಕೀಲರ ಸಂಘದ ಅಧ್ಯಕ್ಷ ಡಿ.ಜಿ. ಬಿರಾದಾರ್, ಹನುಮಂತಗೌಡ ಕುಬಕಡ್ಡಿ, ಸಿದ್ದು ಹೂಗಾರ, ಇಸ್ಮಾಯಿಲ್ ತಹಶೀಲ್ದಾರ್, ಮಾಳಪ್ಪ ಗುಣದಾಳ ಸೇರಿದಂತೆ ಅನೇಕ ರೈತರು ಭಾಗವಹಿಸಿದ್ದರು.

Tags:

error: Content is protected !!