ಆ ಜಿಲ್ಲೆ ಭೀಕರ ಬರಗಾಲಕ್ಕೆ ಹೆಸರು ವಾಸಿಯಾಗಿರುವ ಜಿಲ್ಲೆ . ಮುಂಗಾರು ಮಳೆ ಕೊರತೆಯಿಂದಾಗಿ ಇಡೀ ರಾಜ್ಯವೇ ಕಂಗಾಲಾಗಿದೆ. ಆದ್ರೆ ಕೃಷ್ಣಾ ನದಿಯ ಪಾತ್ರದಲ್ಲಿ ಒಂದು ಕಡೆ ನೆರೆಯ ಭೀತಿ ಇದ್ದರೆ, ಅದೇ ಕೃಷ್ಣೆಯ ಜಲವನ್ನು ಅವಲಂಬಿಸಿರುವ ವಿಜಯಪುರ ಜಿಲ್ಲೆಯಲ್ಲಿ ಭೀಕರ ಬರಗಾಲದ ಛಾಯೆ ಆವರಿಸಿದೆ. ಆಲಮಟ್ಟಿ ಅಣೆಕಟ್ಟಿನ ಹಿಂಭಾಗದಲ್ಲಿ ಒಳಹರಿವು ಹೆಚ್ಚಾಗಿದೆ, ಆದರೆ ಅಣೆಕಟ್ಟಿನ ಮುಂಭಾಗದ ರೈತರು ಮಾತ್ರ ಮಳೆಗಾಗಿ ಹಾತೊರೆಯುತ್ತಿದ್ದಾರೆ. ಈ ಕುರಿತು ಇಲ್ಲಿದೆ ಒಂದು ವರದಿ…

ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ವಿಜಯಪುರದ ಅನ್ನದಾತ ಕಂಗಾಲಾಗಿದ್ದಾನೆ. ಜಿಲ್ಲೆಯಾದ್ಯಂತ ಮಳೆಯೇ ಇಲ್ಲದೆ ಕೃಷಿ ಭೂಮಿ ಪಾಳು ಬಿದ್ದಿದೆ. ಬಿತ್ತನೆ ಕಾರ್ಯ ನಡೆಯದ ಕಾರಣ ಲಕ್ಷಾಂತರ ಎಕರೆ ಜಮೀನು ಬಿಕೋ ಎನ್ನುತ್ತಿದೆ. ಪ್ರತಿ ವರ್ಷ ಈ ವೇಳೆಗೆ 7.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ನಡೆಯಬೇಕಿತ್ತು. ಆದರೆ ಈ ಬಾರಿ ಮಳೆ ಆಶ್ರಿತ ಪ್ರದೇಶದಲ್ಲಿ ಕೇವಲ 18-20% ಪ್ರದೇಶದಲ್ಲಿ ಮಾತ್ರ ಬಿತ್ತನೆ ನಡೆದಿದ್ದು, ಮಳೆ ಆಶ್ರಿತ ಬಹುತೇಕ ಜಮೀನುಗಳಲ್ಲಿ ಬಿತ್ತನೆಯೇ ನಡೆದಿಲ್ಲ. ಮಳೆಗಾಗಿ ಅನ್ನದಾತ ಮುಗಿಲಿನತ್ತ ಮುಖ ಮಾಡಿದ್ದಾನೆ. ನಾವು ಸಾಲ ಮಾಡಿ ಜಮೀನು ಹದಗೊಳಿಸಿದ್ದೇವೆ. ಮಳೆ ಇಲ್ಲದೆ ನಮ್ಮ ಬದುಕು ಬರ್ಬಾದ್ ಆಗುತ್ತಿದ್ದೇವೆ. ಸರ್ಕಾರ ಕನಿಷ್ಠ ಸಾಲದ ಬಡ್ಡಿಯನ್ನಾದರೂ ಮನ್ನಾ ಮಾಡಲಿ ಎಂದು ಸರ್ಕಾರಕ್ಕೆ ರಿಪಬ್ಲಿಕ್ ಕನ್ನದ ಮೂಲಕ ಮನವಿ ಮಾಡಿದ್ದಾರೆ…
ವಾಡಿಕೆಯಂತೆ ಉತ್ತಮ ಮಳೆ ಆಗಿದ್ದರೆ ಭೂತಾಯಿ ಹಸಿರು ಸೀರೆ ಉಟ್ಟಂತೆ ಬೆಳೆ ಬರುತ್ತಿತ್ತು. ತೊಗರಿ, ಹೆಸರು, ಸೂರ್ಯಕಾಂತಿ, ಮೂಕಣಿ, ಉದ್ದು ಸೇರಿದಂತೆ ಮುಖ್ಯ ಬೆಳೆಗಳು ರೈತನ ಕೈಗೆ ಬೆಳೆ ಬರಬೇಕಿತ್ತು. ಆದರೆ ಮಳೆ ಇಲ್ಲದೆ ಬಿತ್ತನೆ ಕಾರ್ಯವೇ ನಿಂತುಹೋಗಿದೆ. ಜಲಾಶಯದ ನೀರನ್ನು ನಂಬಿ ಬಿತ್ತನೆ ಮಾಡಬೇಡಿ ಎಂದು ಸರ್ಕಾರ ಕರೆ ನೀಡಿದೆ. ಆದರೆ, ಸಾಲ ಸೋಲ ಮಾಡಿ ಜಮೀನನ್ನು ಹದಗೊಳಿಸಿರುವ ರೈತರಿಗೆ ಈಗ ಜಾನುವಾರುಗಳಿಗೆ ಮೇವು ಇಲ್ಲದ ಪರಿಸ್ಥಿತಿ ಎದುರಾಗಿದೆ. ದನ-ಕರುಗಳನ್ನು ಮಾರುವ ಸ್ಥಿತಿಗೆ ರೈತ ಬಂದಿದ್ದಾನೆ. ಬೆಳೆ ಇಲ್ಲದ ಕಾರಣ ರೈತ ತನ್ನ ಭೂಮಿಗೆ ತಾನೇ ಬರಲು ಸಾಧ್ಯವಾಗುತ್ತಿಲ್ಲ…
ಒಟ್ಟಾರೆ, ಸರ್ಕಾರ ತಕ್ಷಣ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಬೇಕು. ಸಂಕಷ್ಟದಲ್ಲಿರುವ ನಮಗೆ ಕೂಡಲೇ ಪರಿಹಾರ ನೀಡಬೇಕು. ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿವೆ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು, ಸಂಕಷ್ಟದಲ್ಲಿರುವ ಅನ್ನದಾತರ ನೆರವಿಗೆ ಧಾವಿಸಬೇಕಿದೆ.
ವಿಜಯಕುಮಾರ ಸಾರವಾಡ,
ಇನ್ ನ್ಯೂಜ್,
ವಿಜಯಪುರ.
