ಸಾರ್ವಜನಿಕರ ಮತ್ತು ಗ್ರಾಮೀಣ ಭಾಗದ ಜನರ ಅನುಕೂಲಕ್ಕಾಗಿ ವಿವಿಧ ಗ್ರಾಮಗಳಲ್ಲಿ ಸಮುದಾಯ ಭವನಗಳನ್ನು ನಿರ್ಮಾಣ ಮಾಡಲಾಗಿದೆ.ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ತಿಳಿಸಿದರು.


ಅವರು ಚಿಕ್ಕೋಡಿ ತಾಲೂಕಿನ ರಾಯಬಾಗ ವಿಧಾನಸಭಾ ಕ್ಷೇತ್ರದ ನಾಗರಮುನ್ನೋಳಿ ಗ್ರಾಮದಲ್ಲಿ ಬಸ್ ನಿಲ್ದಾಣ, ರಸ್ತೆ, ಸರ್ಕಾರಿ ಆಸ್ಪತ್ರೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಉಮರಾಣಿ, ಮುಗಳಿ, ಡೊಣವಾಡ, ಕರಗಾಂವ ಮತ್ತು ಕುಂಗಟೊಳಿ ಗ್ರಾಮಗಳಲ್ಲಿ ನೂತನವಾಗಿ ನಿರ್ಮಿಸಲಾದ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನಗಳನ್ನು ಅವರು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಸಂಸದರು, ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ನಾವು ಬದ್ಧರಾಗಿದ್ದೇವೆ. ಸದ್ಯ ಸಂಕೇಶ್ವರ-ಜೀವರ್ಗಿ ರಸ್ತೆಗಳಲ್ಲಿನ ತಗ್ಗು-ಗುಂಡಿಗಳನ್ನು ಮುಚ್ಚುವ ಕಾಮಗಾರಿ ಈಗಾಗಲೇ ಪ್ರಾರಂಭವಾಗಿದೆ. ಇನ್ನು ಕರೋಶಿ ಗ್ರಾಮದಲ್ಲಿರುವ ಶತಮಾನ ಕಂಡ ಐತಿಹಾಸಿಕ ಶಾಲೆಯ ಅಭಿವೃದ್ಧಿಯ ಬಗ್ಗೆ ಶೀಘ್ರದಲ್ಲೇ ಸೂಕ್ತ ಚರ್ಚೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳಲಾಗುವುದು,” ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಪ್ರಮುಖ ಮುಖಂಡರಾದ ಮಹಾವೀರ ಮೊಹಿತೆ, ಸಿದ್ದಪ್ಪ ಮರ್ಯಾಯಿ, ಶಿವು ಮರ್ಯಾಯಿ, ಸುರೇಶ ಘರಬುಡೆ ಹಾಗೂ ರುದ್ರಪ್ಪಾ ಸಂಗಪ್ಪಗೋಳ ಅವರು ಮಾತನಾಡಿ, ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಶಿವನಗೌಡ ಪಾಟೀಲ, ನಿರ್ಮಲಾ ಪಾಟೀಲ, ಅರ್ಜುನ ನಾಯಿಕವಾಡಿ, ಹಾಜಿ ಮುಲ್ಲಾ, ನ್ಯಾಯವಾದಿ ರಾಮಪ್ಪ ಪೂಜಾರಿ, ಸಂಜಯ ಪಾಟೀಲ, ಕೃಷ್ಣಾ ಜೋಗಳೆ, ಶಂಕರಗೌಡ ಪಾಟೀಲ, ಅಮರ ಮಂಗಾಜ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ಸಾರ್ವಜನಿಕರು ಉಪಸ್ಥಿತರಿದ್ದರು.
