Chikkodi

ಕೋಟಬಾಗಿ ಏತ ನೀರಾವರಿ ಕಾಲುವೆ ಕೊನೆ ಭಾಗದ ಹಳ್ಳಿಗಳಿಗೆ ನೀರು ಹರಿಸಿ: ತಹಶೀಲ್ದಾರರಿಗೆ ಕಿಸಾನ್ ಸಂಘದಿಂದ ಮನವಿ

Share

ತಾಲ್ಲೂಕಿನ ಕೋಟಬಾಗಿ ಏತ ನೀರಾವರಿ ಕಾಲುವೆಯ ಕೊನೆಯ ನಾಲ್ಕು ಹಳ್ಳಿಗಳಿಗೆ ಸಮರ್ಪಕವಾಗಿ ನೀರು ಹರಿಸುವಂತೆ ಆಗ್ರಹಿಸಿ ಭಾರತೀಯ ಕಿಸಾನ್ ಸಂಘದ ಚಿಕ್ಕೋಡಿ ಘಟಕದ ವತಿಯಿಂದ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ಕಳೆದ 3-4 ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಕೊನೆಯ ಹಳ್ಳಿಗಳಿಗೆ ನೀರು ಹರಿಸಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕಾಲುವೆಯಲ್ಲಿ ಸಂಪೂರ್ಣವಾಗಿ ಹೂಳು ತುಂಬಿಕೊಂಡಿದ್ದು, ಇದುವರೆಗೆ ಯಾವುದೇ ದುರಸ್ತಿ ಕಾರ್ಯ ನಡೆದಿಲ್ಲ. ರೈತರು ನೀರಿಗಾಗಿ ಕೇಳಿದರೆ, ಅಧಿಕಾರಿಗಳು ಮೋಟಾರ್ ರಿಪೇರಿ ಇದೆ, ಜಾಕ್‌ವೆಲ್‌ನಲ್ಲಿ ನೀರಿಲ್ಲ ಎಂಬ ಬೇಜವಾಬ್ದಾರಿಯ ಉತ್ತರಗಳನ್ನು ನೀಡುತ್ತಾ ಕಾಲಹರಣ ಮಾಡುತ್ತಿದ್ದಾರೆ. ಇದರಿಂದಾಗಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಪ್ರಸ್ತುತ ಕಾಲುವೆಯ 1 ರಿಂದ 6 ನೇ ಗೇಟ್‌ವರೆಗೆ ನೀರು ಹರಿಯುತ್ತಿದ್ದು, 7 ಮತ್ತು 8 ನೇ ಗೇಟ್ ಇರುವ ಕೊನೆಯ ಭಾಗಕ್ಕೆ ನೀರು ತಲುಪುತ್ತಿಲ್ಲ. ಮಳೆಯಿಲ್ಲದೆ ಇತ್ತೀಚೆಗೆ ದನಕರುಗಳಿಗೆ ಕುಡಿಯುವ ನೀರಿನ ತೊಂದರೆಯೂ ಎದುರಾಗಿದೆ. ಹತ್ತಿರದಲ್ಲೇ ಹಿರಣ್ಯಕೇಶಿ ನದಿ ತುಂಬಿ ಹರಿಯುತ್ತಿದ್ದರೂ, ಕಣ್ಣೆದುರೇ ನೀರಿದ್ದರೂ ರೈತರಿಗೆ ಮಾತ್ರ ಅನ್ಯಾಯವಾಗುತ್ತಿದೆ. ಮುಂದಿನ 2-3 ದಿನಗಳಲ್ಲಿ ಕೊನೆಯ ಹಳ್ಳಿಗಳಿಗೂ ತಲುಪುವಂತೆ ನೀರು ಹರಿಸದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸಂಘದ ಅಧ್ಯಕ್ಷರಾದ ರಾಜಪ್ಪ ಶಿವಪ್ಪ ಶಿವಾಪೂರೆ ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಭಾರತೀಯ ಕಿಸಾನ್ ಸಂಘದ ಪದಾಧಿಕಾರಿಗಳು ಹಾಗೂ ಭಾಗದ ರೈತರು ಉಪಸ್ಥಿತರಿದ್ದರು.

 

Tags:

error: Content is protected !!