ಬೆಳಗಾವಿ ನಗರದ ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಕಳ್ಳಭಟ್ಟಿ ಸಾರಾಯಿ ಮಾರಾಟ ದಂಧೆಗೆ ಪೊಲೀಸರು ಬ್ರೇಕ್ ಹಾಕಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ತನಗಾಗಿ ಲಾಭ ಮಾಡಿಕೊಳ್ಳಲು ಅಕ್ರಮವಾಗಿ ಸಾರಾಯಿ ಮಾರುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಬೆಳಗಾವಿ ತಾಲೂಕಿನ ಮುತ್ನಾಳ ರೋಡ್ ನಿವಾಸಿಯಾದ 40 ವರ್ಷದ ಹೊಳೆಪ್ಪ ಲಕ್ಷ್ಮಣ ಹೂಜೇರಿ ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ. ಈತ ಕಿಂಡೋಳ್ಳಿ ಗ್ರಾಮದ ಹದ್ದಿಯ ಕಿಂಡೋಳ್ಳಿ-ಮುತ್ನಾಳ ರಸ್ತೆಯ ಪಕ್ಕದಲ್ಲಿರುವ ತಾತ್ಕಾಲಿಕ ಶೆಡ್ನಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿ ಮಾರಾಟ ಮಾಡುತ್ತಿದ್ದನು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಮಾರಿಹಾಳ ಪೊಲೀಸ್ ಠಾಣೆಯ ಪಿಎಸ್ಐ ಎಂ.ಎಸ್. ರುದ್ರಾಪೂರ ಮತ್ತು ಅವರ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ಸ್ಥಳದ ಮೇಲೆ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಆರೋಪಿತನಿಂದ ಬಿಳಿ ಬಣ್ಣದ ಕ್ಯಾನ್ಗಳಲ್ಲಿದ್ದ ಸುಮಾರು 20 ಲೀಟರ್ನಷ್ಟು ಕಳ್ಳಭಟ್ಟಿ ಸಾರಾಯಿಯನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಸದ್ಯ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಯಶಸ್ವಿ ದಾಳಿ ನಡೆಸಿದ ಪೊಲೀಸ್ ತಂಡವನ್ನು ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.
