Kagawad

ಐನಾಪುರದ ಪದ್ಮಾವತಿ ಶಿಕ್ಷಣ ಸಂಸ್ಥೆಯಲ್ಲಿ ‘ವಿದ್ಯಾರ್ಥಿ ಸಂಸತ್’ ಚುನಾವಣೆ: ಸಚಿವರಾಗಿ ವಿದ್ಯಾರ್ಥಿಗಳ ಪ್ರಮಾಣವಚನ

Share

ಸಂಪೂರ್ಣ ವಿಶ್ವದಲ್ಲೇ ಭಾರತ ದೇಶವು ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಇಲ್ಲಿನ ಸಂಸದೀಯ ಮಂಡಳಿ ಚುನಾವಣೆಯ ಬಗ್ಗೆ ಎಲ್ಲ ವಿದ್ಯಾರ್ಥಿಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಚುನಾವಣಾ ಪ್ರಕ್ರಿಯೆಯ ಮಾಹಿತಿ ದೊರೆಯಲಿ ಎಂಬ ಉದ್ದೇಶದಿಂದ ವಿದ್ಯಾರ್ಥಿಗಳಲ್ಲಿ ‘ಸಂಸದ ಚುನಾವಣಾ ಪ್ರಕ್ರಿಯೆ’ಯ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಐನಾಪುರದ ಪದ್ಮಾವತಿ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯಲ್ಲಿ ಈ ಕಾರ್ಯಕ್ರಮ ಜರುಗಿತು ಎಂದು ಸಂಸ್ಥೆಯ ಅಧ್ಯಕ್ಷರಾದ ನ್ಯಾಯವಾದಿ ಸಂಜಯ ಕುಚನೂರೆ ತಿಳಿಸಿದರು.

ಶನಿವಾರದಂದು ಐನಾಪುರದ ಶ್ರೀ ಪದ್ಮಾವತಿ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಆಂಗ್ಲ ಮಾಧ್ಯಮದ ಪದ್ಮಾವತಿ ಸೆಂಟ್ರಲ್ ಸ್ಕೂಲ್ ವಿಭಾಗದ ವಿದ್ಯಾರ್ಥಿಗಳಿಗೆ ಸಂಸದ ಚುನಾವಣೆ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನೆರವೇರಿಸಲಾಯಿತು. ವಿವಿಧ ವಿಭಾಗಗಳ ಸಚಿವರನ್ನು ಆಯ್ಕೆ ಮಾಡಿ ಅವರಿಗೆ ಅಧಿಕಾರ ಹಸ್ತಾಂತರಿಸುವ ಅಪರೂಪದ ಕಾರ್ಯಕ್ರಮ ಹಾಗೂ ಪ್ರಮಾಣವಚನ ಸ್ವೀಕರಿಸುವ ವಿಶೇಷ ಸನ್ನಿವೇಶ ವಿದ್ಯಾರ್ಥಿಗಳಿಂದ ನೆರವೇರಿತು. ಈ ಸನ್ನಿವೇಶವನ್ನು ಕಂಡು ಎಲ್ಲ ಪಾಲಕರು ಮತ್ತು ಶಿಕ್ಷಕರಿಗೆ ಕೆಲ ಸಮಯ ಕೇಂದ್ರ ಸರ್ಕಾರದಲ್ಲಿ ಜರುಗುವ ನೈಜ ಚುನಾವಣೆಯಂತೆಯೇ ಭಾಸವಾಯಿತು.

ರಾಷ್ಟ್ರಪತಿಗಳ ಪಾತ್ರದಲ್ಲಿದ್ದ ಸಂಸ್ಥೆಯ ಅಧ್ಯಕ್ಷ ನ್ಯಾಯವಾದಿ ಸಂಜಯ ಕುಚನೂರೆ ಇವರು ಸಚಿವರಿಗೆ ಪ್ರಮಾಣವಚನ ಬೋಧಿಸಿದರು. ವಿದ್ಯಾರ್ಥಿಗಳು ಆಂಗ್ಲ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಿ, ಬೇರೆ ಬೇರೆ ಇಲಾಖೆಗಳ ಅಧಿಕಾರ ವಹಿಸಿಕೊಂಡರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ನೆರವೇರುವ ಚುನಾವಣೆಯ ಎಲ್ಲ ಸನ್ನಿವೇಶಗಳು ಇಲ್ಲಿ ಎದ್ದು ಕಾಣುತ್ತಿದ್ದವು.

ಶಿಕ್ಷಣ ಸಂಸ್ಥೆಯ ಪ್ರಾಚಾರ್ಯರಾದ ಮೈತು ಮಾತನಾಡಿ, “ವಿದ್ಯಾರ್ಥಿಗಳಿಗೆ ಕೇವಲ ಪಠ್ಯಪುಸ್ತಕಗಳ ಜ್ಞಾನ ನೀಡಿದರೆ ಸಾಲುವುದಿಲ್ಲ. ಅವರಿಗೆ ಸಮಾಜ ವಿಜ್ಞಾನ ವಿಷಯದ ಭಾಗವಾಗಿ ಭಾರತ ದೇಶದ ಪ್ರಜಾಪ್ರಭುತ್ವ, ಇಲ್ಲಿ ಜರುಗುವ ಚುನಾವಣೆ ಎಂದರೇನು?, ಸಚಿವರು ಯಾರು?, ಮತದಾನ ಎಂದರೇನು?, ಅಧಿಕಾರ ಸ್ವೀಕರಿಸುವುದು ಹೇಗೆ? ಮತ್ತು ದೇಶದಲ್ಲಿರುವ ಸಂಸದರ ಕರ್ತವ್ಯ ಹಾಗೂ ಇಲಾಖೆಗಳ ಜವಾಬ್ದಾರಿಗಳನ್ನು ಹೇಗೆ ನಿಭಾಯಿಸಬೇಕು ಎಂಬುದರ ಬಗ್ಗೆ ನಿಖರವಾದ ಮಾಹಿತಿಯನ್ನು ಈ ಕಾರ್ಯಕ್ರಮದಲ್ಲಿ ನೀಡಲಾಯಿತು. ಎಲ್ಲ ವಿದ್ಯಾರ್ಥಿಗಳು ಧೈರ್ಯದಿಂದ ಇದರಲ್ಲಿ ಭಾಗವಹಿಸಿ ಪ್ರಮಾಣವಚನ ಸ್ವೀಕರಿಸಿದರು. ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಸೂಕ್ತ ಮಾಹಿತಿ ನೀಡಿ, ಒಬ್ಬ ಜವಾಬ್ದಾರಿಯುತ ಭಾರತೀಯ ಪ್ರಜೆಯಾಗಿ ತಾವು ಮಾಡಬೇಕಾದ ಕರ್ತವ್ಯಗಳ ಬಗ್ಗೆ ಬೋಧನೆ ಮಾಡಲಾಯಿತು,” ಎಂದು ಹೇಳಿದರು.

ಈ ಶಾಲಾ ಸಂಸತ್ ಚುನಾವಣೆಯಲ್ಲಿ ಕುಶಾಲ್ ಪಾಟೀಲ್ ‘ಹೆಡ್ ಬಾಯ್’ ಆಗಿ ಹಾಗೂ ಸವಿತಾ ಮಗದುಮ್ ‘ಹೆಡ್ ಗರ್ಲ್’ ಆಗಿ ಆಯ್ಕೆಗೊಂಡರು. ಅವರೊಂದಿಗೆ ಬೇರೆ ಬೇರೆ ಇಲಾಖೆಗಳ ಪ್ರಮುಖರನ್ನು (ಸಚಿವರನ್ನು) ಆಯ್ಕೆ ಮಾಡಲಾಯಿತು.

ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರು, ಶಿಕ್ಷಕರು ಹಾಗೂ ಪಾಲಕರು ಈ ಇಡೀ ಚುನಾವಣೆ ಪ್ರಕ್ರಿಯೆಯನ್ನು ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ರವೀಂದ್ರ ಬನಿಜವಾಡ, ಪ್ರಮೋದ್ ಲಿಂಬಿಕಾಯಿ, ವಸಂತ್ ಹುದ್ದಾರ, ಶೀತಲ್ ಪಾಟೀಲ್, ಮೋಹನ್ ಪಾಟೀಲ್, ಮಂಜುನಾಥ್ ಕುಂಚನೂರೆ, ಸಂತೋಷ್ ತೆರದಾಳೆ, ಬಾಪುಸಾಹೇಬ್ ಪಾಟೀಲ್ ಸೇರಿದಂತೆ ಪಾಲಕರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

Tags:

error: Content is protected !!