ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನಲ್ಲಿ ಭೀಕರ ಕೊಲೆಯೊಂದು ಬೆಳಕಿಗೆ ಬಂದಿದೆ. ಕಳೆದ ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದ ವಿವಾಹಿತ ಮಹಿಳೆಯೊಬ್ಬರು ಕಬ್ಬಿನ ಗದ್ದೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ವರ್ಚಗಲ್ ಗ್ರಾಮದ ಬಳಿಯ ಕಬ್ಬಿನ ಹೊಲವೊಂದರಲ್ಲಿ 30 ವರ್ಷದ ವಿವಾಹಿತ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತರನ್ನು ಬದನೂರು ಗ್ರಾಮದ ನಿವಾಸಿ ಅನುಸೂಯಾ ಲಕ್ಷಣ ರಂಗಣ್ಣವರ ಎಂದು ಗುರುತಿಸಲಾಗಿದೆ. ಕಳೆದ ಜುಲೈ 7ರಂದು ಸಂತೆಗೆಂದು ಲೋಕಾಪುರ ಪಟ್ಟಣಕ್ಕೆ ಬಂದಿದ್ದ ಅನುಸೂಯಾ ಅವರು ವಾಪಸ್ ಮನೆಗೆ ಮರಳದಿದ್ದಾಗ, ಪತಿ ನಾಪತ್ತೆ ಕುರಿತು ದೂರು ನೀಡಿದ್ದರು. ಆದರೆ, ನಾಲ್ಕು ದಿನಗಳ ಬಳಿಕ ಕಬ್ಬಿನ ಹೊಲದಲ್ಲಿ ಶವ ಪತ್ತೆಯಾಗಿದ್ದು, ಇವರನ್ನು ಕೊಲೆ ಮಾಡಿ ಬೀಸಾಡಿರುವ ಶಂಕೆ ವ್ಯಕ್ತವಾಗಿದೆ. ಮೃತ ಮಹಿಳೆಯು ಅನೈತಿಕ ಸಂಬಂಧ ಹೊಂದಿದ್ದ ಹಲಗಲಿ ಗ್ರಾಮದ ನಿವಾಸಿ ಸೋಮಪ್ಪ ಹಳ್ಳಿ ಎಂಬಾತನೇ ಈ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದ್ದು, ಸದ್ಯ ಲೋಕಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
