ಅರಣ್ಯ ಪ್ರದೇಶದಲ್ಲಿ ಮೇಯಲು ಹೋದ ಮೇಕೆಯೊಂದನ್ನು ಅಧಿಕಾರಿಗಳು ವಶಕ್ಕೆ ಪಡೆದ ಪರಿಣಾಮ, ಇತ್ತ ತಾಯಿಯ ಹಾಲಿಲ್ಲದೆ 6 ಮರಿಗಳು ಸಾವಿನ ದವಡೆಗೆ ಸಿಲುಕಿವೆ. ಅರಣ್ಯ ಇಲಾಖೆಯ ಈ ಅಮಾನವೀಯ ನಡೆಯನ್ನು ಖಂಡಿಸಿ ಬಾಗಲಕೋಟೆ ಜಿಲ್ಲೆಯ ಬೀಳಗಿ ತಹಶೀಲ್ದಾರ್ ಕಚೇರಿ ಎದುರು ಓಲೆ ಹೊಡಿಸಿ ವಿನೂತನವಾಗಿ ಪ್ರತಿಭಟಿಸಲಾಗುತ್ತಿದೆ.

ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಸುನಗ ಅರಣ್ಯ ಪ್ರದೇಶದಲ್ಲಿ ನಾಲ್ಕು ದಿನಗಳ ಹಿಂದೆ ಮೇಯಲು ಹೋಗಿದ್ದ ಮೇಕೆಯೊಂದನ್ನು ಅರಣ್ಯ ಅಧಿಕಾರಿಗಳು ಕಾನೂನು ಉಲ್ಲಂಘನೆಯ ನೆಪದಲ್ಲಿ ವಶಕ್ಕೆ ಪಡೆದಿದ್ದಾರೆ. ಆದರೆ, ಈ ಮೇಕೆಗೆ ಕೇವಲ ಕೆಲವು ದಿನಗಳ ಹಿಂದಷ್ಟೇ ಜನಿಸಿದ 6 ಪುಟ್ಟ ಮರಿಗಳಿದ್ದು, ಅವು ಕಳೆದ ನಾಲ್ಕು ದಿನಗಳಿಂದ ದಡ್ಡಿಯಲ್ಲೇ (ಕೊಟ್ಟಿಗೆ) ತಾಯಿಯ ಹಾಲಿಲ್ಲದೆ ಹಸಿವಿನಿಂದ ನರಳುತ್ತಿವೆ. ಅಧಿಕಾರಿಗಳ ಈ ಕ್ರಮದಿಂದ ಕಂಗೆಟ್ಟ ಬಡ ಕುರಿಗಾಹಿಗಳು ಹಾಗೂ ರೈತ ಸಂಘದ ಮುಖಂಡರು ಇಂದು ಬೀಳಗಿ ತಹಶೀಲ್ದಾರ್ ಕಚೇರಿ ಮುಂದೆ ಜಮಾಯಿಸಿ, ಓಲೆ ಹೊಡಿಸುವ ಮೂಲಕ ಸರ್ಕಾರದ ವಿರುದ್ಧ ವಿನೂತನವಾಗಿ ಆಕ್ರೋಶ ಹೊರಹಾಕಿದರು.
ಪ್ರತಿಭಟನಾ ನಿರತ ರೈತರು ಮತ್ತು ಕುರಿಗಾಹಿಗಳು ಅರಣ್ಯ ಇಲಾಖೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮೇಕೆಯ ಮೇಲಿನ ದಂಡವನ್ನು ತಕ್ಷಣವೇ ಹಿಂಪಡೆಯಬೇಕು ಮತ್ತು ಮೂಕಪ್ರಾಣಿಗಳ ಜೀವದ ಜೊತೆ ಆಟವಾಡಿದ ಸಂಬಂಧಪಟ್ಟ ಅರಣ್ಯ ಅಧಿಕಾರಿಯನ್ನು ತಕ್ಷಣವೇ ಅಮಾನತುಗೊಳಿಸಬೇಕು ಎಂದು ಕಡಕ್ ಆಗ್ರಹ ಮಾಡಿದರು. ಇದೇ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಅರಣ್ಯ ಅಧಿಕಾರಿಗಳು ಮತ್ತು ಕುರಿಗಾಹಿಗಳು ಹಾಗೂ ರೈತರ ಮಧ್ಯೆ ತೀವ್ರ ವಾಗ್ದಾಳಿ ನಡೆದು ಪರಿಸರ ಉದ್ವಿಗ್ನಗೊಂಡಿತ್ತು. ತಕ್ಷಣವೇ ಮಧ್ಯಪ್ರವೇಶಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿ, ಶಾಂತಿ ಕಾಪಾಡಿದರು. ಬಡ ರೈತನ ಜೀವನಾಧಾರವಾಗಿರುವ ಮೇಕೆಯನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ.
