ಮುಖ್ಯಮಂತ್ರಿಯಾದ ಬಳಿಕ ಇಂದು ಸಿಎಂ ಡಿ.ಕೆ.ಶಿವಕುಮಾರ್ ಬೆಳಗಾವಿಗೆ ಮೊದಲ ಬಾರಿಗೆ ಭೇಟಿ ನೀಡಿದ್ದು, ಬೆಳಗಾವಿ ಜಿಲ್ಲಾಡಳಿತ, ಕಾಂಗ್ರೆಸ್ಸಿಗರು ಮತ್ತು ಅವರ ಅಭಿಮಾನಿಗಳಿಂದ ಅದ್ಧೂರಿ ಸ್ವಾಗತವನ್ನು ಕೋರಲಾಯಿತು. ಸುವರ್ಣಸೌಧದತ್ತ ಪ್ರಯಾಣ ಬೆಳೆಸಿದ ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಸಾಂಬ್ರಾ ಸೇರಿದಂತೆ ವಿವಿಧ ಮಾರ್ಗಗಳಲ್ಲಿ ದಾರಿಯುದ್ದಕ್ಕೂ ಪುಷ್ಪವೃಷ್ಠಿಗೈದು, ಜೆಸಿಬಿ ಮೂಲಕ ಬೃಹತ್ ಸೇಬು ಹಣ್ಣಿನ ಹಾರವನ್ನು ಹಾಕಿ ಆದರದ ಸ್ವಾಗತ ಕೋರಲಾಯಿತು.


ಮುಖ್ಯಮಂತ್ರಿಯಾದ ಬಳಿಕ ಇಂದು ಸಿಎಂ ಡಿ.ಕೆ.ಶಿವಕುಮಾರ್ ಬೆಳಗಾವಿಗೆ ಮೊದಲ ಬಾರಿಗೆ ಭೇಟಿ ನೀಡಿದ್ದು, ಬೆಳಗಾವಿ ಜಿಲ್ಲಾಡಳಿತ, ಕಾಂಗ್ರೆಸ್ಸಿಗರು ಮತ್ತು ಅವರ ಅಭಿಮಾನಿಗಳಿಂದ ಅದ್ಧೂರಿ ಸ್ವಾಗತವನ್ನು ಕೋರಲಾಯಿತು.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಜಿಲ್ಲಾಡಳಿತದ ವತಿಯಿಂದ ಆತ್ಮೀಯ ಸ್ವಾಗತ ದೊರೆಯಿತು ಹಾಗೂ ಬೆಳಗಾವಿ ನಗರ ಪೊಲೀಸರಿಂದ ಗೌರವ ರಕ್ಷೆ (ಗಾರ್ಡ್ ಆಫ್ ಆನರ್) ನೀಡಲಾಯಿತು. ವಿಮಾನ ನಿಲ್ದಾಣದ ಹೊರಗೆ ನೆರೆದಿದ್ದ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳು ‘ಡಿ.ಕೆ. ಡಿ.ಕೆ.’ ಎಂದು ಜೈಕಾರ ಕೂಗಿ ಅದ್ಧೂರಿ ಸ್ವಾಗತ ಕೋರಿದರು.
ಈ ಸಂದರ್ಭದಲ್ಲಿ ಸಚಿವರಾದ ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕರಾದ ಆಸೀಫ್ ಸೇಠ್, ಅಶೋಕ ಪಟ್ಟಣ್, ಮಹೇಂದ್ರ ತಮ್ಮಣ್ಣವರ, ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಸೇರಿದಂತೆ ಹಲವು ನಾಯಕರು ಆತ್ಮಿಯವಾಗಿ ಸ್ವಾಗತ ಕೋರಿದರು. ಬಳಿಕ ಸಿಎಂ ಡಿ.ಕೆ.ಶಿವಕುಮಾರ್ ಅವರು ನಾಯಕರೊಂದಿಗೆ ಒಂದೇ ಕಾರಿನಲ್ಲಿ ಬೆಳಗಾವಿ ನಗರದತ್ತ ಪ್ರಯಾಣ ಬೆಳೆಸಿದರು.
ಸುವರ್ಣಸೌಧದತ್ತ ಪ್ರಯಾಣ ಬೆಳೆಸಿದ ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಸಾಂಬ್ರಾ ಸೇರಿದಂತೆ ವಿವಿಧ ಮಾರ್ಗಗಳಲ್ಲಿ ಕಾಂಗ್ರೆಸ್ಸಿಗರು ಮತ್ತು ಅಭಿಮಾನಿಗಳಿಂದ ವಿಜೃಂಭಣೆಯ ಸ್ವಾಗತ ಕೋರಲಾಯಿತು. ದಾರಿಯುದ್ದಕ್ಕೂ ಪುಷ್ಪವೃಷ್ಠಿಗೈದು, ಜೆಸಿಬಿ ಮೂಲಕ ಬೃಹತ್ ಸೇಬು ಹಣ್ಣಿನ ಹಾರವನ್ನು ಹಾಕಿ ಆದರದ ಸ್ವಾಗತ ಕೋರಲಾಯಿತು. ಸಿಎಂ ಡಿ.ಕೆ.ಶಿ ಆಗಮಿಸುತ್ತಿದ್ದಂತೆ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಎಲ್ಲೆಡೆ ಡಿ.ಕೆ. ಡಿ.ಕೆ. ಎಂಬ ಜಯಘೋಷ ಕೇಳಿ ಬರುತ್ತಿತ್ತು. ಚಲಿಸುತ್ತಿದ್ದ ಕಾರಿನಿಂದ ಹೊರ ಬಂದು ಜನರಿಗೆ ಕೈ ಬೀಸಿ ಸಿಎಂ ಡಿ.ಕೆ.ಶಿವಕುಮಾರ್ ಕೂಡ ಧನ್ಯವಾದ ಅರ್ಪಿಸಿದ್ದು, ವಿಶೇಷವಾಗಿತ್ತು.
