State

ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಭಾರೀ ಅಕ್ರಮ; ಚುನಾವಣಾ ಆಯೋಗಕ್ಕೆ ವಿಪಕ್ಷಗಳ ಜಂಟಿ ದೂರು

Share

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದ ನಾಯಕರು ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರದ ಕಾಂಗ್ರೆಸ್ಸಿನ ಕುಮ್ಮಕ್ಕಿನಿಂದ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆಯುತ್ತಿವೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಗಂಭೀರ ಆರೋಪ ಮಾಡಿದ್ದಾರೆ. ವಿಶೇಷವಾಗಿ ವಾಟ್ಸಾಪ್ ಗ್ರೂಪ್‌ಗಳನ್ನು ರಚಿಸಿ, ಸಂತೆ ನಡೆಯುವ ಪ್ರದೇಶಗಳು, ಮದರಸಾಗಳು ಮತ್ತು ಮಸೀದಿಗಳಲ್ಲಿ ಹಾಗೂ ಕಾಂಗ್ರೆಸ್ಸಿನ ಹಿಂದಿನ ಚುನಾಯಿತ ಪ್ರತಿನಿಧಿಗಳ ಮನೆಯಲ್ಲಿ, ನಿರ್ದಿಷ್ಟ ಸಮುದಾಯದ (ಮುಸ್ಲಿಮರ) ನಾಯಕರ ಮೂಲಕ ಓಣಿ ಮತ್ತು ಬೂತ್ ಮಟ್ಟದಲ್ಲಿ ಕೆಲಸ ಮಾಡಿಸಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ. ಬೂತ್ ಮಟ್ಟದ ಅಧಿಕಾರಿಗಳು ಮಾಹಿತಿ ನೀಡದೆ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಲೋಪದೋಷಗಳನ್ನು ಸರಿಪಡಿಸಿ, ನಂತರ ಮತ್ತೆ ಎಸ್‌ಐಆರ್ ಪ್ರಕ್ರಿಯೆಯನ್ನು ಆರಂಭಿಸಬೇಕು ಎಂದು ವಿಪಕ್ಷಗಳು ಆಗ್ರಹಿಸಿವೆ. ಅಕ್ರಮಗಳ ಬಗ್ಗೆ ತಾವು ಸಂಗ್ರಹಿಸಿದ ಪೆನ್‌ಡ್ರೈವ್‌ನಲ್ಲಿರುವ ಮಾಹಿತಿಗಳನ್ನು ಚುನಾವಣಾ ಆಯೋಗಕ್ಕೆ ನೀಡಿದ್ದೇವೆ ಎಂದು ನಾಯಕರು ತಿಳಿಸಿದ್ದಾರೆ.

ಇನ್ನು ಮುಖ್ಯಮಂತ್ರಿಗಳ ವಿರೋಧ ಪಕ್ಷಗಳಿರುವುದು ಕೇವಲ ಟೀಕೆ ಮಾಡಲು ಎಂಬ ಹೇಳಿಕೆಗೆ ತಿರುಗೇಟು ನೀಡಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳು ಜಾಣಕುರುಡುತನ ಪ್ರದರ್ಶಿಸುತ್ತಿದ್ದಾರೆ. ಮುಖ್ಯಮಂತ್ರಿಗಳು ಕೂಡ ಪ್ರತಿದಿನ ಕೇಂದ್ರ ಸರ್ಕಾರವನ್ನ ಟೀಕಿಸುತ್ತಿಲ್ಲವೇ? ಮುಖ್ಯಮಂತ್ರಿಗಳು ಮತ್ತು ಅವರ ನಾಯಕರು ಮಾಡುತ್ತಿರುವ ಕೆಲಸವೇನು? ನಾವು ದಾಖಲೆಗಳ ಸಮೇತ ಇಟ್ಟಿದ್ದೇವೆ. ನೀವು ಪೊಳ್ಳು ಹೇಳಿಕೆಗಳನ್ನು ನೀಡಿ ದೇಶದ ಮಾನ ಮರ್ಯಾದೆಯನ್ನು ಹಾಳು ಮಾಡುತ್ತಿದ್ದಾರೆಂದು ಜರಿದರು. ಎಸ್.ಐ.ಆರ್’ನಲ್ಲಿ ದೋಷವಿಲ್ಲ. ಪ್ರಕ್ರಿಯೆ ಮಾಡುವಲ್ಲಿ ದೋಷವಿದೆ ಎಂದರು.

ಬೆಂಗಳೂರಿನಲ್ಲಿ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗೆ ದೂರು ಸಲ್ಲಿಕೆಯಾಗಿದ್ದು, ಕೇಂದ್ರ ಸಚಿವರಾದ ಹೆಚ್ಡಿ ಕುಮಾರಸ್ವಾಮಿ, ಪ್ರಲ್ಹಾದ್ ಜೋಶಿ, ವಿಪಕ್ಷ ನಾಯಕರಾದ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ, ಸಂಸದ ಗೋವಿಂದ ಕಾರಜೋಳ, ಶಾಸಕ ಡಾಕ್ಟರ್ ಅಶ್ವತ್ಥ್ ನಾರಾಯಣ ಮತ್ತು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಸೇರಿದಂತೆ ಹಲವು ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Tags:

error: Content is protected !!