ಕಳೆದ ಎರಡು ದಿನಗಳಿಂದ ಪೇಡಾ ನಗರಿ ಧಾರವಾಡದಲ್ಲಿ ಜಿಟಿ ಜಿಟಿ ಮಳೆ ಸುರಿಯುತ್ತಿದ್ದು, ಧಾರವಾಡ ತಾಲೂಕಿನ ಅನ್ನದಾತರ ಮುಖದಲ್ಲಿ ಮಳೆರಾಯ ಮಂದಹಾಸ ಮೂಡಿಸಿದ್ದಾನೆ.

ಹೌದು… ರೈತರು ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿರುವ ಶೇಂಗಾ, ಸೋಯಾಬೀನ್, ಉದ್ದು, ಹೆಸರು ಬೆಳೆಗಳಲ್ಲಿ ಬೆಳದ ಅನ್ನದಾತರಲ್ಲಿ ವರುಣ ಕೃಪೆ ಇಲ್ಲದೆ ರೈತರು ಕಂಗಾಲಾಗಿದ್ದರು. ಮಳೆಗಾಗಿ ರೈತರು ಗ್ರಾಮೀಣ ಜನ ವಿವಿಧ ರೀತಿಯ ಪೂಜೆ ಕೈಂಕರ್ಯಗಳ ಮೊರೆ ಹೋಗಿದ್ದರು. ಈಗ ಕೊನೆಗೂ ವರ್ಷಧಾರೆ ರೈತರ ಮೇಲೆ ಕೃಪೆ ತೋರಿದ್ದು, ಧಾರವಾಡ ತಾಲೂಕಿನ ನವಲೂರು ಕವಲಗೇರಿ, ಯಾದವಾಡ, ಕಮಲಾಪುರ, ಎತ್ತಿನಗುಡ್ಡ, ಅಮ್ಮಿನಭಾವಿ ಸೇರಿದಂತೆ ವಿವಿಧ ಕಡೆಗಳಲ್ಲಿ ಮಳೆಯಾಗುತ್ತಿದೆ. ಜಿಟಿ ಜಿಡಿ ಮಳೆಯಿಂದಾಗಿ ಕಮರುತ್ತಿದ್ದ ಬೆಳೆ ಈಗ ಚಿಗರುತ್ತಿದ್ದು, ಹಸಿರಾಗುತ್ತಿವೆ. ಕಳೆದೆರಡು ದಿನಗಳಿಂದ 30ನಿಮಿಷಕೊಮ್ಮೆ ಮಳೆಯಾಗುತ್ತಿದೆ. ಅಲ್ಪ ಸ್ವಲ್ಪ ಮಳೆಯಿಂದ ಇದೀಗ ರೈತರು ನಿಟ್ಟುಸಿರು ಬಿಡುವಂತಾಗಿದೆ. ಧಾರವಾಡ ತಾಲೂಕಿನಲ್ಲಿ ಇದೀಗ ರೈತನ ಕೃಷಿ ಚಟುವಟಿಕೆಗಳು ಗರಿಗೆದರಿವೆ.
