ಉತ್ತರ ಕರ್ನಾಟಕ ಜೀವನಾಡಿಯಾಗಿರುವ ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯಕ್ಕೆ ಕೊನೆಗೂ ಮುಂಗಾರಿನ ಮೊದಲ ಆಶಾಕಿರಣ ಕಾಣಿಸಿದೆ. ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆ ಚುರುಕುಗೊಂಡ ಪರಿಣಾಮ, ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಸಾವಿರ ಕ್ಯೂಸೆಕ್ ದಾಟಿದೆ. ಕಳೆದ ಹಲವು ದಿನಗಳಿಂದ ಬಹುತೇಕ ಒಳಹರಿವು ಇಲ್ಲದೆ ಡೆಡ್ ಸ್ಟೋರೇಜ್ನತ್ತ ಸಾಗಿದ್ದ ಜಲಾಶಯಕ್ಕೆ ಈಗ ನೀರು ಬರಲಾರಂಭಿಸಿರುವುದು ರೈತರು ಮತ್ತು ಜನರಲ್ಲಿ ನಿರೀಕ್ಷೆ ಮೂಡಿಸಿದೆ. ಈ ಕುರಿತು ಇಲ್ಲಿದೆ ಒಂದು ವರದಿ…


ಹೌದು… ನೆರೆಯ ರಾಜ್ಯ ಮಹಾರಾಷ್ಟ್ರದ ಮಹಾಬಲೇಶ್ವರ ಸೇರಿದಂತೆ ಪಶ್ಚಿಮ ಘಟ್ಟ ಹಾಗೂ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಪರಿಣಾಮ ಕೃಷ್ಣಾ ನದಿಯಲ್ಲಿ ಹೊಸ ನೀರು ಹರಿದು ಬರುತ್ತಿದೆ. ಅದರ ಪರಿಣಾಮವಾಗಿ ಜುಲೈ 6 ರಂದು ಬೆಳಗ್ಗೆ 8 ಗಂಟೆಯ ವೇಳೆಗೆ ಆಲಮಟ್ಟಿ ಜಲಾಶಯಕ್ಕೆ ಸರಾಸರಿ 1,239 ಕ್ಯೂಸೆಕ್ ನೀರು ಒಳಹರಿವು ದಾಖಲಾಗಿದೆ. ಹಲವು ದಿನಗಳ ನಂತರ ಸಾವಿರ ಕ್ಯೂಸೆಕ್ಗಿಂತ ಹೆಚ್ಚಿನ ಒಳಹರಿವು ದಾಖಲಾಗಿರುವುದು ಜಲಾಶಯಕ್ಕೆ ಹೊಸ ಚೈತನ್ಯ ನೀಡಿದೆ.
ಪ್ರಸ್ತುತ ಆಲಮಟ್ಟಿ ಜಲಾಶಯದ ನೀರಿನ ಮಟ್ಟ 507.79 ಮೀಟರ್ ಇದ್ದು, ಒಟ್ಟು ನೀರಿನ ಸಂಗ್ರಹ 20.654 ಟಿಎಂಸಿ ಆಗಿದೆ. ಇದರಲ್ಲಿ ಬಳಕೆಗೆ ಲಭ್ಯವಿರುವ ಲೈವ್ ಸ್ಟೋರೇಜ್ ಕೇವಲ 3.034 ಟಿಎಂಸಿ ಮಾತ್ರ ಇದೆ. ಜಲಾಶಯದಿಂದ ಒಟ್ಟು 822 ಕ್ಯೂಸೆಕ್ ನೀರು ಹೊರಹರಿಯುತ್ತಿದ್ದು, ಒಳಹರಿವು ಈಗ ಹೊರಹರಿವಿಗಿಂತ ಹೆಚ್ಚಿರುವುದರಿಂದ ಮುಂದಿನ ದಿನಗಳಲ್ಲಿ ನೀರಿನ ಮಟ್ಟದಲ್ಲಿ ನಿಧಾನವಾಗಿ ಏರಿಕೆ ಕಾಣುವ ಸಾಧ್ಯತೆ ಇದೆ.
ಒಟ್ನಲ್ಕಿ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಮಹಾರಾಷ್ಟ್ರದ ಜಲಾನಯನ ಪ್ರದೇಶದಲ್ಲಿ ಮಳೆ ಇದೇ ರೀತಿ ಮುಂದುವರಿದರೆ, ಮುಂದಿನ ದಿನಗಳಲ್ಲಿ ಆಲಮಟ್ಟಿ ಜಲಾಶಯಕ್ಕೆ ಇನ್ನಷ್ಟು ಪ್ರಮಾಣದಲ್ಲಿ ನೀರಿನ ಒಳಹರಿವು ಹೆಚ್ಚುವ ನಿರೀಕ್ಷೆಯಿದೆ. ಜೂನ್ ತಿಂಗಳಲ್ಲಿ ಮಳೆ ಕೊರತೆಯಿಂದ ಆತಂಕದಲ್ಲಿದ್ದ ರೈತರಿಗೆ ಇದೀಗ ಸಾವಿರ ಕ್ಯೂಸೆಕ್ ದಾಟಿದ ಒಳಹರಿವು ಮುಂಗಾರಿನ ಮೊದಲ ಆಶಾಕಿರಣವಾಗಿ ಗೋಚರಿಸುತ್ತಿದೆ.
ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ
