ಬೆಳಗಾವಿಯ ಶಹಾಪುರದಲ್ಲಿ ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ನಾಥಪಂಥಿ ರಾವಳ್ ಸಮಾಜದ ಪ್ರಥಮ ಐತಿಹಾಸಿಕ ಒಂದು ದಿನದ ಮಹಾ ಅಧಿವೇಶನ ಅತ್ಯಂತ ಉತ್ಸಾಹದಿಂದ ಜರುಗಿತು. ಮೂರೂ ರಾಜ್ಯಗಳ ಸಮಾಜದ ಗಣ್ಯರು ಒಗ್ಗೂಡಿ, ಸಮಾಜದ ಸರ್ವಾಂಗೀಣ ಪ್ರಗತಿಗಾಗಿ ಮಹತ್ವದ ಸಂಕಲ್ಪವನ್ನು ತೊಟ್ಟರು.

ಬೆಳಗಾವಿಯ ಶಹಾಪುರ ಖಡೇಬಜಾರ್‌ನ ನಾಥ್ ಪೈ ಚೌಕ್‌ನಲ್ಲಿರುವ ಶ್ರೀ ಅಂಬಾಬಾಯಿ ಮಂದಿರದಲ್ಲಿ ಶ್ರೀ ಕಾಳಭೈರವನಾಥ ಮಂದಿರ ಶಹಾಪುರ ಹಾಗೂ ನಾಥಪಂಥಿ ರಾವಳ್ ಸಮಾಜದ ವತಿಯಿಂದ ಭಾನುವಾರ ಈ ಬೃಹತ್ ಅಧಿವೇಶನವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪರಶುರಾಮ್ ಚವ್ಹಾಣ್ ವಹಿಸಿದ್ದರು. ವೇದಿಕೆಯಲ್ಲಿ ಕಲ್ಲಪ್ಪ ರಾವಳ್, ವಿಜಯ್ ನಾಯ್ಕ್, ಹನುಮಂತ್ ಹಣಗಿ (ಹುಬ್ಬಳ್ಳಿ), ಬಿ. ನಾಗರಾಜ್ (ಬೆಂಗಳೂರು), ಕುಮಾರ್ ರಾವಳ್ (ಮಿರಜ್), ಪ್ರಮೋದ್ ರಾವಳ್ (ಇಚಲಕರಂಜಿ), ಎಂ. ತೋಟಪ್ಪ (ಶಿವಮೊಗ್ಗ), ತವನಪ್ಪ ರಾವಳ್ (ಬನಹಟ್ಟಿ), ಸೋಮನಾಥ್ ಗಂಧವಾಲೆ (ಯುವ ಅಧ್ಯಕ್ಷರು), ಶಿವರಾಮ್ ಜೋಗಿ (ಮುರುಡೇಶ್ವರ), ಸಿದ್ದಪ್ಪ ಬಾವಲಿ, ಮಂಜುನಾಥ್ ಹಣಗಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ಮಾಜಿ ಶಾಸಕ ಸಂಜಯ್ ಪಾಟೀಲ್, ಶಹಾಪುರ ಪೊಲೀಸ್ ಠಾಣೆಯ ಸಿಪಿಐ ಸೀಮಾನಿ ಹಾಗೂ ಪ್ರಸಿದ್ಧ ತೆರಿಗೆ ಸಲಹೆಗಾರ ಸಂದೀಪ್ ಖನ್ನುಕರ್ ವಿಶೇಷ ಆಮಂತ್ರಿತರಾಗಿ ಪಾಲ್ಗೊಂಡಿದ್ದರು. ಇದೇ ವೇಳೆ ಮಂದಿರದ ದಾನಿಗಳನ್ನು, ಸಮಾಜದ ಹಿರಿಯರನ್ನು ಹಾಗೂ ಶ್ರೀ ಕಾಳಭೈರವನಾಥ ಮಂದಿರ ಟ್ರಸ್ಟ್ ಪದಾಧಿಕಾರಿಗಳನ್ನು ಶಾಲೂ ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಅಧಿವೇಶನದಲ್ಲಿ ಸಮಾಜದ ಅಭಿವೃದ್ಧಿಗೆ ಪೂರಕವಾದ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಯಿತು. ನಾಥಪಂಥಿ ರಾವಳ್ ಸಮಾಜವು ವಿವಿಧ ಜಾತಿ ಸಮುದಾಯಗಳಲ್ಲಿ ವಿಭಜನೆಯಾಗಿದ್ದು, ಎಲ್ಲರೂ ಒಂದೇ ಜಾತಿಯಡಿ ಸಂಘಟಿತರಾದರೆ ಮಾತ್ರ ಸರಕಾರಿ ಯೋಜನೆಗಳ ಲಾಭ ಪಡೆಯಲು ಸುಲಭವಾಗುತ್ತದೆ ಮತ್ತು ಸಮಾಜದ ಪ್ರಗತಿ ಸಾಧ್ಯ ಎಂದು ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು. ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಗಡಿಭಾಗಕ್ಕೆ ಹೊಂದಿಕೊಂಡಿರುವುದರಿಂದ ಸಮಾಜದ ಪ್ರಮುಖ ಸಂಪರ್ಕ ಕೇಂದ್ರವಾಗಿ ಬೆಳಗಾವಿ ನಗರವನ್ನು ಆಯ್ಕೆ ಮಾಡಲಾಯಿತು. ಅಲ್ಲದೆ, ಸಮಾಜದ ಬಾಂಧವರಲ್ಲಿ ನಿರಂತರ ವಿಚಾರ ವಿನಿಮಯಕ್ಕಾಗಿ ಪ್ರತಿ ವರ್ಷ ಒಂದೊಂದು ರಾಜ್ಯದಲ್ಲಿ ಅಧಿವೇಶನ ನಡೆಸಲು ತೀರ್ಮಾನಿಸಲಾಯಿತು. ಆರಂಭದಲ್ಲಿ ಗಣ್ಯರು ದೀಪ ಬೆಳಗಿ ಚಾಲನೆ ನೀಡಿದರು. ಮಂದಿರ ಟ್ರಸ್ಟ್ ಕಮಿಟಿ ಅಧ್ಯಕ್ಷ ಹಾಗೂ ಮಾಜಿ ಮಹಾಪೌರ ಮಹೇಶ್ ನಾಯ್ಕ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಟ್ರಸ್ಟ್ ಕಮಿಟಿ ಕಾರ್ಯದರ್ಶಿ ವಿಜಯ್ ನಾಯ್ಕ್ ವಂದಿಸಿದರು. ಮಂಜುನಾಥ್ ಚವ್ಹಾಣ್ ಕಾರ್ಯಕ್ರಮ ನಿರೂಪಿಸಿದರು.
