Vijaypura

ಉತ್ತರ ಕರ್ನಾಟಕ ಜೀವನದಿ ಕೃಷ್ಣೆಗೆ ಅವಮಾನ ಮಾಡಿದ ಹೇಳಿಕೆಗೆ ಬಿಳಿಮಲೆ ಕ್ಷಮೆಯಾಚಿಸಲಿ: ಹಸಿರು ಸೇನೆ ಆಗ್ರಹ

Share

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ಅವರು ಇತ್ತೀಚೆಗೆ ನೀಡಿರುವ “ಕಾವೇರಿ ಮಾತ್ರ ನಮ್ಮ ಅಸ್ಮಿತೆ, ಕೃಷ್ಣ ಅಲ್ಲ” ಎಂಬ ಹೇಳಿಕೆ ಉತ್ತರ ಕರ್ನಾಟಕದ ಜನರ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ್ದು, ಕೂಡಲೇ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಹಸಿರು ಸೇನೆ ರಾಜ್ಯಾಧ್ಯಕ್ಷ ಸಂಗಮೇಶ ಸಗರ ಹಾಗೂ ರೈತ ಮುಖಂಡರು ಒತ್ತಾಯಿಸಿದರು. ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ಅವರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಆಯುಕ್ತರು ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಕೃಷ್ಣಾ ಮತ್ತು ಕಾವೇರಿ ಎರಡೂ ಕರ್ನಾಟಕದ ಜೀವನಾಡಿಗಳಾಗಿದ್ದು, ಎರಡೂ ನದಿಗಳು ರಾಜ್ಯದ ಅಸ್ಮಿತೆಯ ಸಂಕೇತಗಳಾಗಿವೆ. ಕೃಷ್ಣಾ ನದಿ ಉತ್ತರ ಕರ್ನಾಟಕದ ಲಕ್ಷಾಂತರ ರೈತರ ಬದುಕಿಗೆ ಆಧಾರವಾಗಿದ್ದು, ರಾಜ್ಯದ ಕುಡಿಯುವ ನೀರು, ನೀರಾವರಿ ಹಾಗೂ ಕೈಗಾರಿಕೆಗಳಿಗೆ ಮಹತ್ವದ ಕೊಡುಗೆ ನೀಡುತ್ತಿದೆ ಎಂದು ಹೇಳಿದರು. ಕೃಷ್ಣಾ ನದಿ ಮಹಾರಾಷ್ಟ್ರದ ಮಹಾಬಲೇಶ್ವರ ದಲ್ಲಿ ಹುಟ್ಟಿ ಕರ್ನಾಟಕದಲ್ಲಿ ಸುಮಾರು 480 ಕಿ.ಮೀ. ಹರಿದು, ರಾಜ್ಯದ ವಿಜಯಪುರ, ಬಾಗಲಕೋಟೆ, ಬೆಳಗಾವಿ, ರಾಯಚೂರು, ಕೊಪ್ಪಳ, ಯಾದಗಿರಿ, ವಿಜಯನಗರ ಸೇರಿದಂತೆ ಹಲವು ಜಿಲ್ಲೆಗಳ ಕೃಷಿ ಹಾಗೂ ಜನಜೀವನಕ್ಕೆ ಆಸರೆಯಾಗಿದೆ. ರಾಜ್ಯದ ಉತ್ತರ ಭಾಗದ ನೀರಾವರಿ ಯೋಜನೆಗಳು, ಆಲಮಟ್ಟಿ, ನಾರಾಯಣಪುರ ಸೇರಿದಂತೆ ಪ್ರಮುಖ ಜಲಾಶಯಗಳು ಕೃಷ್ಣಾ ನದಿಯನ್ನೇ ಅವಲಂಬಿಸಿವೆ. ರಾಜ್ಯದ ಲಕ್ಷಾಂತರ ಹೆಕ್ಟೇರ್ ಕೃಷಿ ಭೂಮಿಗೆ ಜೀವಜಲ ಒದಗಿಸುವ ಮೂಲಕ ಅನ್ನದಾತರ ಬದುಕಿಗೆ ಆಧಾರ ವಾಗಿದೆ ಎಂದು ತಿಳಿಸಿದರು.

ಇಂತಹ ಮಹತ್ವದ ನದಿಯನ್ನು ಕಡೆಗಣಿಸುವ ರೀತಿಯ ಹೇಳಿಕೆ ನೀಡಿರುವುದು ಸಮಂಜಸವಲ್ಲ. ಕನ್ನಡದ ಹಿರಿಯ ಚಿಂತಕರಾಗಿರುವ ಪ್ರೊ. ಬಿಳಿಮಲೆ ಅವರು ರಾಜ್ಯದ ಎಲ್ಲ ಭಾಗಗಳ ಜನರ ಭಾವನೆ ಗಳನ್ನು ಗೌರವಿಸಿ ತಮ್ಮ ಹೇಳಿಕೆಯನ್ನು ಹಿಂಪಡೆದು ಉತ್ತರ ಕರ್ನಾಟಕದ ಜನರ ಕ್ಷಮೆ ಯಾಚಿಸಬೇಕು. ರಾಜ್ಯ ಸರ್ಕಾರವೂ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯ ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಆಯುಕ್ತರು ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಲಾಯಿತು.

Tags:

error: Content is protected !!