Vijaypura

ವಿಜಯಪುರ ಕೃಷ್ಣಾ ನದಿಯಲ್ಲಿ ನಾಪತ್ತೆಯಾದ ಟಿಪ್ಪರ್ ಚಾಲಕನಿಗಾಗಿ ಹುಡುಕಾಟ ಮುಂದುವರಿಕೆ

Share

ವಿಜಯಪುರ–ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯ ಕೊರ್ತಿ–ಕೊಲ್ದಾರ ಸೇತುವೆ ಬಳಿ ಕೃಷ್ಣಾ ನದಿಗೆ ಉರುಳಿ ಬಿದ್ದ ಟಿಪ್ಪರ್ ಅಪಘಾತ ಪ್ರಕರಣದಲ್ಲಿ ನಾಪತ್ತೆಯಾಗಿರುವ ಚಾಲಕನಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಟಿಪ್ಪರ್ ಅನ್ನು ಮೇಲಕ್ಕೆ ಎತ್ತಲಾಗಿದ್ದು, ಇದೀಗ ಬೋಟ್ ಮೂಲಕ ಚಾಲಕನಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ. ಬುಧವಾರ ಸಂಜೆ ಟಿಪ್ಪರ್ ಕಾರಿಗೆ ಡಿಕ್ಕಿ ಹೊಡೆದ ಬಳಿಕ ಚಾಲಕನ ನಿಯಂತ್ರಣ ತಪ್ಪಿ ಸೇತುವೆಯ ತಡೆಗೋಡೆ ಒಡೆದು ಕೃಷ್ಣಾ ನದಿಗೆ ಉರುಳಿ ಬಿದ್ದಿತ್ತು. ಅಪಘಾತದಲ್ಲಿ ಟಿಪ್ಪರ್ ಚಾಲಕ ಬಾಗಲಕೋಟೆ ತಾಲ್ಲೂಕಿನ ಬೆಣ್ಣೂರು ಗ್ರಾಮದ ಸಂತೋಷ ಕೋಟಿ ನದಿಯಲ್ಲಿ ನಾಪತ್ತೆಯಾಗಿದ್ದು, ಕ್ಲೀನರ್ ಸಂಜು ಮೂಲಗೆ ಅವರನ್ನು ಸ್ಥಳೀಯ ಮೀನುಗಾರರು ತೆಪ್ಪದ ಮೂಲಕ ರಕ್ಷಿಸಿದ್ದರು.

ಅಪಘಾತದ ಬಳಿಕ ಅಗ್ನಿಶಾಮಕ ದಳ ಹಾಗೂ ಪೊಲೀಸರು ಕ್ರೇನ್ ಬಳಸಿ ಸೇತುವೆ ಮೇಲಿಂದಲೇ ಟಿಪ್ಪರ್ ಅನ್ನು ಮೇಲಕ್ಕೆ ಎತ್ತಲು ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಬಳಿಕ ಹೊಳೆ ದಂಡೆಯಿಂದ ಕಾರ್ಯಾಚರಣೆ ನಡೆಸಿ ಟಿಪ್ಪರ್ ಅನ್ನು ಯಶಸ್ವಿಯಾಗಿ ಮೇಲಕ್ಕೆ ಎತ್ತಲಾಯಿತು. ಇದೀಗ ಅಗ್ನಿಶಾಮಕ ದಳ, ಪೊಲೀಸರು ಹಾಗೂ ಸ್ಥಳೀಯ ಮೀನುಗಾರರ ಸಹಾಯದೊಂದಿಗೆ ಬೋಟ್ ಮೂಲಕ ಕೃಷ್ಣಾ ನದಿಯಲ್ಲಿ ನಾಪತ್ತೆಯಾದ ಚಾಲಕ ಸಂತೋಷ ಕೋಟಿ ಅವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಶನಿವಾರವೂ ಕಾರ್ಯಾಚರಣೆ ಮುಂದುವರಿಯಲಿದ್ದು, ಚಾಲಕನ ಪತ್ತೆಗೆ ಅಧಿಕಾರಿಗಳು ಎಲ್ಲ ರೀತಿಯ ಪ್ರಯತ್ನ ನಡೆಸುತ್ತಿದ್ದಾರೆ.

Tags:

error: Content is protected !!