Belagavi

ಬೆಳಗಾವಿಯಲ್ಲಿ ಶೂರ ವಡ್ಡರ ಯಲ್ಲಣ್ಣ ಚಾರಿತ್ರಿಕ ಕಾದಂಬರಿ ಬಿಡುಗಡೆ: ಶಿಕ್ಷಣ ಹಾಗೂ ಇತಿಹಾಸ ರಕ್ಷಣೆಗೆ ಶಾಸಕ ಆಸೀಫ್ ಸೇಠ್ ಕರೆ

Share

ಬೆಳಗಾವಿ ಮಹಾನಗರದಲ್ಲಿ ಇಂದು ವಡ್ಡರ ಸಮಾಜ ಸಮಾವೇಶ ಹಾಗೂ ಚಾರಿತ್ರಿಕ ಕಾದಂಬರಿ ಬಿಡುಗಡೆ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಜರುಗಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಉತ್ತರ ಕ್ಷೇತ್ರದ ಶಾಸಕ ಆಸೀಫ್ ಸೇಠ್ ಅವರು, ಶಿಕ್ಷಣದಿಂದ ಮಾತ್ರ ಸಮಾಜ ಮತ್ತು ದೇಶದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಕರೆ ನೀಡಿದರು.

ಬೆಳಗಾವಿಯ ಕನ್ನಡ ಭವನದಲ್ಲಿ ಇಂದು ವಡ್ಡರವಾಡಿಯ ವಡ್ಡರ ಯಲ್ಲಣ್ಣ ಯುವ ವೇದಿಕೆಯ ವತಿಯಿಂದ ಮಹಾಶಿವಯೋಗಿ ಶ್ರೀ ಗುರುಸಿದ್ಧರಾಮೇಶ್ವರ ಬೆಳಗಾವಿ ಮಹಾನಗರ ವಡ್ಡರ ಸಮಾಜ ಸಮಾವೇಶ ಹಾಗೂ ನಿವೃತ್ತ ತಹಶೀಲ್ದಾರರು ಮತ್ತು ಕಾದಂಬರಿಕಾರರಾದ ಯ. ರು. ಪಾಟೀಲ್ ಅವರು ಬರೆದ ‘ನೆಲದೊಡಲ ಧ್ವನಿ ಶೂರ ವಡ್ಡರ ಯಲ್ಲಣ್ಣ ’ ಚಾರಿತ್ರಿಕ ಕಾದಂಬರಿಯನ್ನು ಕನ್ನಡ ಭವನದ ಆಶ್ರಯದಲ್ಲಿ ಅದ್ಧೂರಿಯಾಗಿ ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉತ್ತರ ಕ್ಷೇತ್ರದ ಶಾಸಕ ಆಸೀಫ್ ಸೇಠ್, ಡಿಸಿಪಿ ನಾರಾಯಣ್ ಬರಮನಿ, ರಾಜ್ಯ ಭೋವಿ ವಡ್ಡರ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಚೌಡಯ್ಯ, ಯುವಾ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ್ ಜಾರಕಿಹೊಳಿ, ಯುವ ಮುಖಂಡ ಮೃಣಾಲ್ ಹೆಬ್ಬಾಳ್ಕರ್ ಇನ್ನುಳಿದ ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಶಾಸಕ ಆಸೀಫ್ ಸೇಠ್ ಅವರು, ನಮ್ಮ ದೇಶದ ಸಂಸ್ಕೃತಿ ಹಾಗೂ ಇತಿಹಾಸ ಅತ್ಯಂತ ಶ್ರೀಮಂತವಾಗಿದ್ದು, ಇದನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು. ಸಮಾಜದ ಹಿರಿಯರು, ಯುವಕರು ಮತ್ತು ಮಕ್ಕಳು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಹಾಗೂ ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ ಓದಿಸಬೇಕು ಎಂದು ಕರೆ ನೀಡಿದರು. ಇದೇ ವೇಳೆ ಲೇಖಕ ಯ. ರು. ಪಾಟೀಲ್ ಅವರ ಪುಸ್ತಕದ ಕುರಿತು ಮಾತನಾಡುತ್ತಾ, ಈ ಕೃತಿಯು ಮುಂದಿನ ಹತ್ತಾರು ಪೀಳಿಗೆಗೆ ನೈಜ ಇತಿಹಾಸವನ್ನು ಪರಿಚಯಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ; ಇಲ್ಲದಿದ್ದರೆ ಕಾಲಕ್ರಮೇಣ ಇತಿಹಾಸವನ್ನೇ ಬದಲಾಯಿಸುವ ಪರಿಸ್ಥಿತಿ ಎದುರಾಗಬಹುದು ಎಂದು ಕಳಕಳಿ ವ್ಯಕ್ತಪಡಿಸಿ ಲೇಖಕರಿಗೆ ಧನ್ಯವಾದಗಳನ್ನು ಅರ್ಪಿಸಿದರು.

ಇದೇ ವೇಳೆ ವಡ್ಡರ ಸಮಾಜದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರಂಗಕರ್ಮಿ ಬಸವರಾಜ ತಳವಾರ ಅವರು, ಶಾಸಕ ಆಸೀಫ್ ಸೇಠ್ ಅವರು ಹೇಳಿದಂತೆ ಸಮಾಜಕ್ಕೆ ಶಿಕ್ಷಣ ಎಷ್ಟು ಮುಖ್ಯವೋ, ಅಷ್ಟೇ ಮುಖ್ಯವಾಗಿ ಸಮಾಜವನ್ನು ಮುನ್ನಡೆಸಲು ಆತ್ಮಸ್ಥೈರ್ಯವೂ ಬೇಕು ಎಂದು ಅಭಿಪ್ರಾಯಪಟ್ಟರು. ಯ. ರು. ಪಾಟೀಲ ಅವರು ಬರೆದ ‘ನೆಲದೊಡಲ ಧ್ವನಿ ಶೂರ ವಡ್ಡರ ಯಲ್ಲಣ್ಣ ’ ಕೃತಿಯು ಕೇವಲ ಒಂದು ಕಾದಂಬರಿಯಲ್ಲ, ಅದೊಂದು ಯಶೋಗಾಥೆ ಹಾಗೂ ವೀರ ಶೂರರ ಕಥೆಯಾಗಿದೆ. ಇಂತಹ ಇತಿಹಾಸ ಓದುವುದರಿಂದ ಯುವ ಜನರಲ್ಲಿ ಆತ್ಮಸ್ಥೈರ್ಯ ಹೆಚ್ಚುತ್ತದೆ. ದೇಶವನ್ನು ಕಟ್ಟಲು ಯುವಶಕ್ತಿಯನ್ನು ಸರಿಯಾದ ಹಾದಿಯಲ್ಲಿ ನಡೆಸುವ ಮುತ್ಸದ್ದಿ ರಾಜಕಾರಣಿಗಳು ನಮಗೆ ಬೇಕಾಗಿದ್ದಾರೆ; ಯುವಕರನ್ನು ಗುಲಾಮರನ್ನಾಗಿ ಮಾಡುವ ರಾಜಕೀಯ ನಮಗೆ ಬೇಡ ಎಂದು ಹೇಳಿದ ಅವರು, ಇತಿಹಾಸವನ್ನು ಉಳಿಸುವ ನಿಟ್ಟಿನಲ್ಲಿ ಇಂತಹ ಕೃತಿಗಳನ್ನು ತರುವ ಲೇಖಕರಿಗೆ ನಾವೆಲ್ಲರೂ ಬೆಂಬಲವಾಗಿ ನಿಲ್ಲಬೇಕು ಎಂದು ಕರೆ ನೀಡಿದರು.

ಈ ವೇಳ ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ, ರಾಜ್ಯ ಸಂಚಾಲಕ ಸುರೇಶ್ ಗವನ್ನವರ, ವರದಿಗಾರ ಚಂದ್ರು ಶ್ರೀರಾಮುಡು, ಡಾ. ಜಗದೀಶ್ ಸೂರನ್ನವರ ಹಾಗೂ ಅಭಿಯಂತರ ರಣಜೀತ್ ಪಾಟೀಲ್ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.

Tags:

error: Content is protected !!