ಗೋವಾದಲ್ಲಿ ಎಐಸಿಸಿ ಕಾರ್ಯದರ್ಶಿ, ಖಾನಾಪುರದ ಮಾಜಿ ಶಾಸಕಿ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಅವರ ರುದ್ರಾವತಾರ ಕಂಡುಬಂದಿದೆ. ಪಕ್ಷದ ಧ್ವಜವನ್ನು ತೆರವುಗೊಳಿಸಿದ ಸ್ಥಳೀಯ ಆಡಳಿತದ ವಿರುದ್ಧ ದುರ್ಗೆಯಂತೆ ಗರ್ಜಿಸಿರುವ ಅವರು, ವಿರೋಧಿಗಳ ನಿದ್ದೆಗೆಡಿಸಿದ್ದಾರೆ.

ಗೋವಾ ಕಾಂಗ್ರೆಸ್ ಉಸ್ತುವಾರಿ ಹೊಣೆ ಹೊತ್ತಾಗಿನಿಂದಲೂ ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಪಕ್ಷ ಸಂಘಟನೆ ಮಾಡುತ್ತಿರುವ ಎಐಸಿಸಿ ಕಾರ್ಯದರ್ಶಿ ಡಾ. ಅಂಜಲಿ ನಿಂಬಾಳ್ಕರ್, ಸದ್ಯ ಗೋವಾದಲ್ಲಿ ವಿರೋಧಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದಾರೆ. ಇತ್ತೀಚೆಗೆ ಪಕ್ಷದ ಕಾರ್ಯಕ್ರಮ ನಿಮಿತ್ತ ಕಾರ್ಯಕರ್ತರು ರಾತ್ರಿ ಹಗಲೆನ್ನದೆ ಕಟ್ಟಿದ್ದ ಕಾಂಗ್ರೆಸ್ ಧ್ವಜಗಳನ್ನು ಸ್ಥಳೀಯ ಆಡಳಿತದ ಸಿಬ್ಬಂದಿ ತೆರವುಗೊಳಿಸಿ, ವಾಹನದಲ್ಲಿ ಸಾಗಿಸುತ್ತಿರುವುದು ಅಂಜಲಿ ಅವರ ಗಮನಕ್ಕೆ ಬಂದಿದೆ. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಅವರು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು ಬೆವರಿಳಿಸಿದ್ದಾರೆ. “ನಿಮಗೆ ಇಂದಿರಾ ಗಾಂಧಿ, ರಾಹುಲ್ ಗಾಂಧಿ ಅವರ ಇತಿಹಾಸ ಗೊತ್ತಿಲ್ಲವೇ?” ಎಂದು ಆಡಳಿತ ವ್ಯವಸ್ಥೆಯ ವಿರುದ್ಧ ಕೆಂಡಕಾರಿದ ಡಾ. ಅಂಜಲಿ, ಬಳಿಕ ಖುದ್ದಾಗಿ ತಾವೇ ನಿಂತು ಕಾಂಗ್ರೆಸ್ ಧ್ವಜಗಳನ್ನು ಮರುಸ್ಥಾಪಿಸುವ ಮೂಲಕ ವಿರೋಧಿಗಳಿಗೆ ಸವಾಲು ಹಾಕಿದ್ದಾರೆ. ಮಾಜಿ ಶಾಸಕಿಯ ಈ ದೃಢ ಮತ್ತು ಧೈರ್ಯದ ನಡೆ ಸದ್ಯ ಗೋವಾ ಕಾಂಗ್ರೆಸ್ಸಿಗರಲ್ಲಿ ಹಾಗೂ ಯುವ ಕಾರ್ಯಕರ್ತರಲ್ಲಿ ಹೊಸ ಹುರುಪು ಮತ್ತು ಆತ್ಮಸ್ಥೈರ್ಯ ತುಂಬುವಂತೆ ಮಾಡಿದೆ.
