Vijaypura

ಆಲಮಟ್ಟಿ ಜಲಾಶಯಕ್ಕೆ ಇನ್ನೂ ಒಳಹರಿವು ಇಲ್ಲಾ; ರೈತರಲ್ಲಿ ಆತಂಕ, ಭರವಸೆಯ ಆಶಾಕಿರಣದಲ್ಲಿ ಅವಳಿ‌ ಜಿಲ್ಲೆಯ ರೈತರು

Share

ಉತ್ತರ ಕರ್ನಾಟಕದ ಜೀವನಾಡಿಯಾಗಿರುವ ಆಲಮಟ್ಟಿ ಜಲಾಶಯಕ್ಕೆ ಜುಲೈ ತಿಂಗಳು ಆರಂಭವಾದರೂ ಇನ್ನೂ ಒಳಹರಿವು ಆರಂಭವಾಗಿಲ್ಲ. ನೆರೆಯ ಮಹಾರಾಷ್ಟ್ರದ ಪಶ್ಚಿಮ ಘಟ್ಟ ಹಾಗೂ ಕೃಷ್ಣಾ ಕಣಿವೆ ಪ್ರದೇಶದಲ್ಲಿ ಈ ಬಾರಿ ಮಳೆ ಕೊರತೆಯ ಪರಿಣಾಮ ಜಲಾಶಯಕ್ಕೆ ನೀರು ಹರಿದು ಬರುತ್ತಿಲ್ಲ. ಆದರೆ, ಹಿಂದಿನ ವರ್ಷಗಳ ದಾಖಲೆ ನೋಡಿದರೆ ತಡವಾಗಿ ಆರಂಭವಾದ ಒಳಹರಿವಿನ ಬಳಿಕವೂ ಜಲಾಶಯ ಸಂಪೂರ್ಣ ಭರ್ತಿಯಾಗಿರುವ ಉದಾಹರಣೆಗಳಿವೆ. ಸದ್ಯದ ಪರಿಸ್ಥಿತಿ ಹೇಗಿದೆ ಎಂಬುದರ ಕುರಿತು ಈ ವರದಿ…

ಪ್ರತಿ ವರ್ಷ ಜೂನ್ ಅಂತ್ಯದ ವೇಳೆಗೆ ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಆರಂಭವಾಗುವುದು ಸಾಮಾನ್ಯ. ಆದರೆ ಈ ಬಾರಿ ಮಳೆ ಕೊರತೆಯಿಂದ ಜುಲೈ ಆರಂಭವಾದರೂ ಜಲಾಶಯಕ್ಕೆ ಒಳಹರಿವು ಆರಂಭವಾಗಿಲ್ಲ. ಇದರಿಂದ ವಿಜಯಪುರ, ಬಾಗಲಕೋಟೆ ಸೇರಿದಂತೆ ಕೃಷ್ಣಾ ಕಣಿವೆಯ ರೈತರಲ್ಲಿ ಆತಂಕ ಮನೆ ಮಾಡಿದೆ.

ಆದರೆ, ಹಿಂದಿನ ಅಂಕಿ-ಅಂಶಗಳು ರೈತರಿಗೆ ಆಶಾಭರವಸೆ ಮೂಡಿಸಿವೆ. 2012, 2019 ಹಾಗೂ 2023ರಲ್ಲಿ ಜುಲೈ ತಿಂಗಳಲ್ಲೇ ಒಳಹರಿವು ಆರಂಭವಾಗಿದ್ದರೂ ಒಂದೇ ತಿಂಗಳಲ್ಲಿ ಜಲಾಶಯ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿತ್ತು. 2015ರನ್ನು ಹೊರತುಪಡಿಸಿದರೆ ಕಳೆದ ಹಲವು ವರ್ಷಗಳಲ್ಲಿ ಆಲಮಟ್ಟಿ ಜಲಾಶಯ ತನ್ನ ಗರಿಷ್ಠ ಮಟ್ಟವನ್ನು ತಲುಪಿರುವ ದಾಖಲೆ ಇದೆ. ಇದೇ ಕಾರಣಕ್ಕೆ ಈ ವರ್ಷವೂ ತಡವಾದರೂ ಉತ್ತಮ ಮಳೆಯಾದರೆ ಜಲಾಶಯ ಭರ್ತಿಯಾಗುವ ನಿರೀಕ್ಷೆ ಇದೆ. 519.60 ಮೀಟರ್ ಗರಿಷ್ಠ ಮಟ್ಟ ಹೊಂದಿರುವ ಆಲಮಟ್ಟಿ ಜಲಾಶಯದಲ್ಲಿ ಸದ್ಯ ನೀರಿನ ಮಟ್ಟ 507.80 ಮೀಟರ್ ಇದೆ. ಜಲಾಶಯದಲ್ಲಿ ಒಟ್ಟು 20.689 ಟಿಎಂಸಿ ಅಡಿ ನೀರು ಸಂಗ್ರಹವಾಗಿದ್ದು, ಅದರಲ್ಲಿ 3.069 ಟಿಎಂಸಿ ಅಡಿ ಬಳಕೆಯೋಗ್ಯ (ಲೈವ್ ಸ್ಟೋರೇಜ್) ನೀರು ಉಳಿದಿದೆ. ಉಳಿದ 17.52 ಟಿಎಂಸಿ ಅಡಿ ಡೆಡ್ ಸ್ಟೋರೇಜ್ ಆಗಿದೆ.

ಜಲಾಶಯದ ಡೆಡ್ ಸ್ಟೋರೇಜ್ ಮಟ್ಟವಾದ 506.87 ಮೀಟರ್‌ಗೆ ನೀರಿನ ಮಟ್ಟ ಕುಸಿಯಲು ಇನ್ನೂ ಸುಮಾರು ಒಂದು ಮೀಟರ್ ಅಂತರವಿದೆ. ಕಳೆದ ಕೆಲ ದಿನಗಳಿಂದ ಬಿಸಿಲಿನ ತೀವ್ರತೆಯೂ ಕಡಿಮೆಯಾಗಿರುವುದರಿಂದ ನೀರಿನ ಬಳಕೆ ಹಾಗೂ ಆವಿಯಾಗುವ ಪ್ರಮಾಣದಲ್ಲೂ ಇಳಿಕೆ ಕಂಡುಬಂದಿದೆ.

ಇನ್ನು ಆಲಮಟ್ಟಿ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿರುವ ಕುಡಿಯುವ ನೀರಿನ ಜಾಕ್‌ವೆಲ್‌ಗಳು ಸುಮಾರು 505.6 ಮೀಟರ್ ಎತ್ತರದಲ್ಲಿದ್ದು, ಸದ್ಯದ ನೀರಿನ ಸಂಗ್ರಹದಿಂದ ಅವುಗಳಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆಗಸ್ಟ್ 2026ರವರೆಗೂ ಒಳಹರಿವು ಬರದಿದ್ದರೂ ಕುಡಿಯುವ ನೀರಿನ ಪೂರೈಕೆಗೆ ಸಮಸ್ಯೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ರೈತರ ಕಣ್ಣು ಮಾತ್ರ ಈಗ ಆಕಾಶದತ್ತ ನೆಟ್ಟಿದೆ. ಕೃಷ್ಣಾ ಕಣಿವೆ ಹಾಗೂ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಉತ್ತಮ ಮಳೆಯಾಗಿ ಆಲಮಟ್ಟಿಗೆ ಶೀಘ್ರ ಒಳಹರಿವು ಆರಂಭವಾದರೆ ಮಾತ್ರ ಕೃಷಿ ಚಟುವಟಿಕೆಗಳು ಚೇತರಿಕೆ ಕಾಣಲಿದ್ದು, ಲಕ್ಷಾಂತರ ರೈತರ ನಿರೀಕ್ಷೆ ಈಡೇರು ವಂತಾಗಲಿದೆ.

ಒಟ್ಟಾರೆ ಜುಲೈ ಆರಂಭವಾದರೂ ಆಲಮಟ್ಟಿ ಜಲಾಶಯಕ್ಕೆ ಇನ್ನೂ ಒಳಹರಿವು ಆರಂಭವಾಗಿಲ್ಲ. ಆದರೆ ಹಿಂದಿನ ವರ್ಷಗಳ ಅನುಭವದಂತೆ ತಡವಾಗಿ ಮಳೆ ಬಂದರೂ ಜಲಾಶಯ ಭರ್ತಿಯಾಗುವ ಸಾಧ್ಯತೆ ಇದೆ. ಸದ್ಯ ಎಲ್ಲರ ಚಿತ್ತ ಮಳೆಯತ್ತ ನೆಟ್ಟಿದ್ದು, ಮುಂದಿನ ಕೆಲ ದಿನಗಳು ಅತ್ಯಂತ ನಿರ್ಣಾಯಕವಾಗಿವೆ.

ವಿಜಯಕುಮಾರ ಸಾರವಾಡ

ಇನ್ ನ್ಯೂಜ್

ವಿಜಯಪುರ.

Tags:

error: Content is protected !!