ಬೆಳಗಾವಿ ಜಿಲ್ಲೆಯಲ್ಲಿ ವರುಣನ ಕೃಪೆಯಿಂದಾಗಿ ಸದ್ಯಕ್ಕೆ ಎದುರಾಗಿದ್ದ ಕುಡಿಯುವ ನೀರಿನ ಆತಂಕ ಸಂಪೂರ್ಣವಾಗಿ ದೂರವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ಸದ್ಯಕ್ಕೆ ಹಾವೇರಿ ಮಾದರಿಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಮೋಡ ಬಿತ್ತನೆ ಮಾಡುವ ಯಾವುದೇ ಅಗತ್ಯ ಎದುರಾಗಿಲ್ಲ ಎಂದಿದ್ದಾರೆ.

ನಗರದಲ್ಲಿ ಜಂಟಿ ಮಾಧ್ಯಮ ಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸದ್ಯ ಉತ್ತಮ ಮಳೆಯಾಗುತ್ತಿರುವುದರಿಂದ ಕುಡಿಯುವ ನೀರಿನ ಭೀತಿ ನಿವಾರಣೆಯಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು. ಜಿಲ್ಲೆಯ ಪ್ರಮುಖ ಜಲಾಶಯವಾದ ರಾಕಸಕೊಪ್ಪ ಸೇರಿದಂತೆ ಐದು ನದಿಗಳಿಗೆ ನೀರಿನ ಒಳಹರಿವು ಆರಂಭವಾಗಿದೆ. ಪ್ರಸ್ತುತ ಸಾಲಿನಲ್ಲಿ ವಾಡಿಕೆಗಿಂತ ಶೇಕಡಾ 29 ರಷ್ಟು ಮಳೆ ಕೊರತೆಯಾಗಿದ್ದರೂ, ಮುಂದಿನ 3-4 ದಿನಗಳ ಕಾಲ ಇದೇ ರೀತಿ ಮಳೆ ಮುಂದುವರಿದರೆ ಕೊರತೆ ಸಂಪೂರ್ಣವಾಗಿ ನೀಗಲಿದೆ. ಸದ್ಯಕ್ಕೆ ಹಾವೇರಿ ಮಾದರಿಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಮೋಡ ಬಿತ್ತನೆ ಮಾಡುವ ಯಾವುದೇ ಅಗತ್ಯ ಎದುರಾಗಿಲ್ಲ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿ ಬಿತ್ತನೆ ಕಾರ್ಯ ನಡೆದಿದ್ದು, ಒಂದು ವೇಳೆ ಮಳೆ ಕೈಕೊಟ್ಟು ಬೆಳೆ ಹಾನಿಯಾದರೆ ಸರ್ಕಾರದಿಂದ ಪ್ರತ್ಯೇಕ ಸಮೀಕ್ಷೆ ನಡೆಸಿ ರೈತರಿಗೆ ಸೂಕ್ತ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಸಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇನ್ನು, ಮಳೆಯಿಂದಾಗಿ ಕಿತ್ತೂರು ಹಾಗೂ ಬೈಲಹೊಂಗಲ ಭಾಗದ ಹದಗೆಟ್ಟಿರುವ ರಸ್ತೆಗಳನ್ನು ಸದ್ಯಕ್ಕೆ ತಾತ್ಕಾಲಿಕವಾಗಿ ಸಂಚಾರಯೋಗ್ಯವನ್ನಾಗಿ ಮಾಡಲಾಗುವುದು. ಮಳೆಗಾಲ ಮುಗಿದ ನಂತರ, ಡಿಸೆಂಬರ್ ತಿಂಗಳಿನಲ್ಲಿ ಹೊಸ ರಸ್ತೆ ನಿರ್ಮಾಣಕ್ಕೆ ಶಾಶ್ವತ ಯೋಜನೆ ರೂಪಿಸಲಾಗುವುದು ಎಂದರು. ಇದೇ ವೇಳೆ ನಗರದಲ್ಲಿ ಎಲ್ ಅಂಡ್ ಟಿ ಕಾಮಗಾರಿಗಳ ವಿಳಂಬದ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದ್ದು, ಆದಷ್ಟು ಬೇಗ ಪರಿಹಾರ ಒದಗಿಸಲಾಗುವುದು ಎಂದರು.
ಬೆಳಗಾವಿ ನಗರದ ಫುಟ್‌ಪಾತ್ ಹಾಗೂ ಬೀದಿ ಬದಿ ವ್ಯಾಪಾರಸ್ಥರ ತೆರವು ಕಾರ್ಯಾಚರಣೆ ಕುರಿತು ಪ್ರತಿಕ್ರಿಯಿಸಿದ ಸಚಿವರು, ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಬೆಂಗಳೂರು ಮಾದರಿಯಲ್ಲಿಯೇ ಬೆಳಗಾವಿಯಲ್ಲೂ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು. ಆದರೆ ಬಡ ವ್ಯಾಪಾರಿಗಳ ಹಿತದೃಷ್ಟಿಯಿಂದ, ಅವರಿಗೆ ತಮ್ಮ ಸಾಮಗ್ರಿಗಳನ್ನು ಸುರಕ್ಷಿತವಾಗಿ ಸಾಗಿಸಲು ಸೂಕ್ತ ಕಾಲಾವಕಾಶ ನೀಡುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು. ಇದರೊಂದಿಗೆ ತೊಂದರೆಗೊಳಗಾಗುವ ಬೀದಿ ಬದಿ ವ್ಯಾಪಾರಿಗಳಿಗೆ ಮುಂದಿನ ದಿನಗಳಲ್ಲಿ ನಿಯಮಾನುಸಾರ ಪರ್ಯಾಯ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿಯೂ ಗಮನ ಹರಿಸಲಾಗುವುದು ಎಂದು ಭರವಸೆ ನೀಡಿದರು.
ಇನ್ನು ಯಮಕನಮರಡಿಯ ಸ್ವಾಮೀಜಿ ಮೇಲಿನ ಹಲ್ಲೆ ಪ್ರಕರಣವನ್ನು ಕಮಿಟಿಯವರು ಹಾಗೂ ಸ್ವಾಮೀಜಿಯವರೇ ಇತ್ಯರ್ಥ ಪಡಿಸಲಿದ್ದಾರೆ. ಇದನ್ನು ಹಿಂದುಗಳ ಮೇಲಿನ ದೌರ್ಜನ್ಯ ಎಂದು ಬಿಂಬಿಸುತ್ತಿರುವ ಬಿಜೆಪಿಗೆ ಹೆಸರು ಹೇಳದೆ ಟಾಂಗ್ ನೀಡಿದ ಅವರು, “ಚುನಾವಣೆ ಹತ್ತಿರ ಬರುತ್ತಿದ್ದಂತೆ ಸಣ್ಣಪುಟ್ಟ ವಿಷಯಗಳಿಗೂ ನಮ್ಮ ಮೇಲೆ ರಾಜಕೀಯ ಆರೋಪ ಮಾಡಲಾಗುತ್ತಿದೆ. ಇಲ್ಲಿ ಎಮ್ಮಿ, ನಾಯಿ ಸತ್ತರೂ ನಮ್ಮ ಮೇಲೆಯೇ ಆರೋಪ ಹೊರಿಸುತ್ತಾರೆ. ಮುಂಬರುವ 2028ರ ಮೇ ತಿಂಗಳವರೆಗೆ ಇಂತಹ ಆರೋಪ-ಪ್ರತ್ಯಾರೋಪಗಳು ಸಹಜ, ಇದಕ್ಕೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ” ಎಂದು ವಿರೋಧಿಗಳಿಗೆ ಕಠಿಣ ಶಬ್ದಗಳಲ್ಲಿ ತಿರುಗೇಟು ನೀಡಿದರು.
