ರಾಜ್ಯದಲ್ಲಿ ಎಸ್.ಐ.ಆರ್ ಪ್ರಕ್ರಿಯೆ ಪೂರ್ಣಗೊಂಡ ತಕ್ಷಣವೇ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಸರ್ಕಾರ ಸಿದ್ಧವಿದ್ದು, ಈ ಕುರಿತು ಸದನದಲ್ಲಿಯೂ ಧ್ವನಿ ಎತ್ತಿದ್ದೇವೆ ಹಾಗೂ ಮುಂದಿನ ದಿನಗಳಲ್ಲೂ ಧ್ವನಿ ಎತ್ತಲಿದ್ದೇವೆ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೋಳಿ ತಿಳಿಸಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಸದ್ಯಕ್ಕೆ ಕುಡಿಯುವ ನೀರಿನ ಯಾವುದೇ ಅಭಾವವಿಲ್ಲ ಹಾಗೂ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದ ಅವರು, ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಎಂತಹದ್ದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧರಾಗಿದ್ದು, ಇದಕ್ಕಾಗಿ ಅಗತ್ಯ ಅನುದಾನವೂ ಲಭ್ಯವಿದೆ ಎಂದು ಭರವಸೆ ನೀಡಿದ್ದಾರೆ.

ಇಂದು ಬೆಳಗಾವಿಯಲ್ಲಿ ಮಾಧ್ಯಮಗಾರರೊಂದಿಗೆ ಅವರು ಮಾತನಾಡಿದರು. ಗ್ರಾಮ ಪಂಚಾಯತಿ ಮಟ್ಟದಲ್ಲಿ ಕುಡಿಯುವ ನೀರಿನ ಸರಬರಾಜಿಗೆ ಟ್ರ್ಯಾಕ್ಟರ್ಗಳ ಕೊರತೆಯಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಚನ್ನರಾಜ್ ಹಟ್ಟಿಹೋಳಿ, ಈಗಾಗಲೇ ಜಿಲ್ಲಾ ಪಂಚಾಯತ್ ಸಿಇಒ ಅವರೊಂದಿಗೆ ಚರ್ಚಿಸಲಾಗಿದ್ದು, ಇನ್ನೆರಡು ದಿನಗಳಲ್ಲಿ ಟ್ರ್ಯಾಕ್ಟರ್ ಬಾಡಿಗೆ ದರವನ್ನು ನಿಗದಿಪಡಿಸಲಾಗುವುದು ಎಂದರು. ಆ ಬಳಿಕ ಅಧಿಕಾರಿಗಳಿಗೆ ಮುಕ್ತ ಅವಕಾಶ ನೀಡಿ, ಸ್ಥಳೀಯವಾಗಿಯೇ ಟ್ರ್ಯಾಕ್ಟರ್ಗಳನ್ನು ಬಾಡಿಗೆಗೆ ಪಡೆದು ಯಾವುದೇ ಗ್ರಾಮದಲ್ಲಿ ನೀರಿನ ತೊಂದರೆಯಾಗದಂತೆ ಕ್ರಮ ವಹಿಸಲಾಗುವುದು. ಸ್ಥಳೀಯ ಸಂಸ್ಥೆಗಳಲ್ಲಿ ಪ್ರಸ್ತುತ ಆಡಳಿತ ಮಂಡಳಿಗಳಿಲ್ಲದ ಕಾರಣ ಸಾರ್ವಜನಿಕರಿಗೆ ಸ್ವಲ್ಪ ಮಟ್ಟಿನ ಸಮಸ್ಯೆಗಳು ಎದುರಾಗುತ್ತಿದ್ದು, ಎಸ್ಆರ್ ಪ್ರಕ್ರಿಯೆ ಮುಗಿದ ತಕ್ಷಣವೇ ಚುನಾವಣೆಗಳನ್ನು ನಡೆಸಲು ಸರ್ಕಾರ ಸಿದ್ಧವಿದೆ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಬೇಕೆಂದು ಲಕ್ಷಾಂತರ ಜನರು ಕನಸು ಕಂಡಿದ್ದು, ಆ ಲಕ್ಷಾಂತರ ಜನರಲ್ಲಿ ತಾವು ಕೂಡ ಒಬ್ಬರಾಗಿದ್ದೇವೆ ಎಂದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ ಧೀಮಂತ ಹಾಗೂ ಪ್ರಶ್ನಾತೀತ ನಾಯಕರಾಗಿದ್ದು, ಅವರ ನಾಯಕತ್ವವನ್ನು ನಾವೆಲ್ಲರೂ ಒಪ್ಪಿಕೊಂಡಿದ್ದೇವೆ. ಇನ್ನು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಕೆಳಹಂತದಿಂದ ಸುಮಾರು 27 ವರ್ಷಗಳ ಕಾಲ ಸಕ್ರಿಯವಾಗಿ ರಾಜಕಾರಣದಲ್ಲಿ ಕೆಲಸ ಮಾಡಿದ್ದು, ಪಕ್ಷದ ಹೈಕಮಾಂಡ್ ಸೂಕ್ತ ಸಮಯದಲ್ಲಿ ಅವರಿಗೆ ಸಚಿವ ಸ್ಥಾನ ನೀಡಲಿದೆ ಎಂಬ ಭರವಸೆ ಇದೆ ಎಂದರು. ತಾವು ಯಾವುದೇ ನಿಗಮ ಮಂಡಳಿ ಸ್ಥಾನ ಕೇಳಿಲ್ಲ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದರು.
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಕುರಿತು ಮಾತನಾಡಿದ ಹಟ್ಟಿಹೋಳಿ, ಈ ಯೋಜನೆಗಳು ಇಡೀ ದೇಶದಲ್ಲೇ ಅತ್ಯಂತ ಹೆಸರುವಾಸಿಯಾಗಿದ್ದು, ಇದರಿಂದ ಲಕ್ಷಾಂತರ ಜನರ ಬದುಕಿನಲ್ಲಿ ಒಳ್ಳೆಯ ಬದಲಾವಣೆಗಳಾಗಿವೆ ಹಾಗೂ ಮಹಿಳೆಯರು ಸ್ವಾವಲಂಬಿಗಳಾಗಿದ್ದಾರೆ ಎಂದರು. ಗ್ಯಾರಂಟಿ ಯೋಜನೆಗಳ ವಿರುದ್ಧ ಟೀಕೆ ಮಾಡುವುದು ವಿರೋಧ ಪಕ್ಷದವರ ಚಟವಾಗಿದೆ. ಕೇವಲ ಯೋಜನೆಗಳ ಸೌಲಭ್ಯ ಪಡೆಯಲು ರಾಜ್ಯದ ಮತದಾರರ ಗುರುತಿನ ಚೀಟಿ (Voter ID) ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಪರಿಷ್ಕರಣೆ ಮಾಡಲಾಗುತ್ತಿದೆಯೇ ಹೊರತು ಯೋಜನೆ ನಿಲ್ಲಿಸುವುದಿಲ್ಲ. ಈಗಾಗಲೇ ಮೇ ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣ ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ನೇರವಾಗಿ ತಲುಪಿದ್ದು, ಈ ಯೋಜನೆಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ ಮತ್ತು ನಿರಂತರವಾಗಿ ಮುಂದುವರಿಯಲಿವೆ ಎಂದು ಸ್ಪಷ್ಟಪಡಿಸಿದರು.
