Chikkodi

ಅಗ್ನಿವೀರನಾಗಿ ಆಯ್ಕೆಯಾದ ಆರ್.ಡಿ. ಪಿಯು ವಿದ್ಯಾರ್ಥಿ ಓಂಕಾರ ದೊಡಮನಿಗೆ ಭವ್ಯ ಸನ್ಮಾನ

Share

ಭಾರತೀಯ ಸೇನೆಯ ‘ಅಗ್ನಿವೀರ’ ಯೋಜನೆಯಡಿ ಆಯ್ಕೆಯಾಗಿರುವ ಇಲ್ಲಿನ ಆರ್.ಡಿ. ಪದವಿಪೂರ್ವ ಮಹಾವಿದ್ಯಾಲಯದ ಹೆಮ್ಮೆಯ ವಿದ್ಯಾರ್ಥಿ ಓಂಕಾರ ದೊಡಮನಿ ಅವರಿಗೆ ಮಹಾವಿದ್ಯಾಲಯದ ವತಿಯಿಂದ ಇತ್ತೀಚೆಗೆ ಅಭಿನಂದನಾ ಹಾಗೂ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಂಡು ಭವ್ಯವಾಗಿ ಸನ್ಮಾನಿಸಲಾಯಿತು. ಭಾರತೀಯ ಸೇನೆಯ ಕಠಿಣ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಇವರು, ಮುಂಬರುವ ಜುಲೈ 7, 2026ರಂದು ಅಧಿಕೃತವಾಗಿ ಸೇವೆಗೆ ಹಾಜರಾಗಲಿದ್ದಾರೆ.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅಗ್ನಿವೀರ ಓಂಕಾರ ದೊಡಮನಿ,
ನನ್ನ ವ್ಯಕ್ತಿತ್ವ ರೂಪುಗೊಳ್ಳಲು ಮತ್ತು ರಾಷ್ಟ್ರಸೇವೆಯ ಕನಸನ್ನು ನನಸಾಗಿಸಿಕೊಳ್ಳಲು ಆರ್.ಡಿ. ಕಾಲೇಜಿನ ಉಪನ್ಯಾಸಕರ ಮಾರ್ಗದರ್ಶನ, ಶಿಸ್ತುಬದ್ಧ ಶೈಕ್ಷಣಿಕ ವಾತಾವರಣ ಹಾಗೂ ನಿರಂತರ ಪ್ರೋತ್ಸಾಹವೇ ಪ್ರಮುಖ ಕಾರಣವಾಗಿದೆ. ಮುಂಬರುವ ದಿನಗಳಲ್ಲಿ ಭಾರತೀಯ ಸೇನೆಯಲ್ಲಿ ಅತ್ಯಂತ ಶ್ರದ್ಧೆ, ಧೈರ್ಯ, ಪ್ರಾಮಾಣಿಕತೆ ಹಾಗೂ ಸೇವಾಭಾವದಿಂದ ದೇಶ ಕಾಯುವ ಸಂಕಲ್ಪ ನನ್ನದಾಗಿದೆ,” ಎಂದು ಭಾವುಕರಾಗಿ ನುಡಿದರು.

ಇದೇ ಸಂದರ್ಭದಲ್ಲಿ ಅವರು ಸೇನೆಗೆ ಸೇರಬಯಸುವ ಸಹಪಾಠಿ ಹಾಗೂ ಕಿರಿಯ ವಿದ್ಯಾರ್ಥಿಗಳಿಗೆ ಅಗ್ನಿವೀರ ನೇಮಕಾತಿಯ ಲಿಖಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ಹಾಗೂ ಅದಕ್ಕೆ ಮಾಡಿಕೊಳ್ಳಬೇಕಾದ ಪೂರ್ವಸಿದ್ಧತೆಗಳ ಕುರಿತು ಸಮಗ್ರ ಮಾಹಿತಿ ನೀಡಿ ಮಾರ್ಗದರ್ಶನ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಯು. ಎಸ್. ಶಿಂದೆ ಅವರು ಮಾತನಾಡಿ, “ಸ್ಪಷ್ಟ ಗುರಿ, ನಿರಂತರ ಪರಿಶ್ರಮ ಹಾಗೂ ಅಚಲ ಆತ್ಮವಿಶ್ವಾಸವನ್ನು ಮೈಗೂಡಿಸಿಕೊಂಡರೆ ಜೀವನದಲ್ಲಿ ಯಾವುದೇ ಸಾಧನೆಯೂ ಅಸಾಧ್ಯವಲ್ಲ ಎಂಬುದನ್ನು ಓಂಕಾರ ನಿರೂಪಿಸಿದ್ದಾನೆ,” ಎಂದು ಶ್ಲಾಘಿಸಿದರು. ಅಲ್ಲದೆ, ಮುಂದಿನ ದಿನಗಳಲ್ಲಿ ಅಗ್ನಿವೀರರಾಗುವ ಕನಸು ಹೊಂದಿರುವ ಕಾಲೇಜಿನ ಇತರ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಎಲ್ಲಾ ರೀತಿಯ ತರಬೇತಿ, ಮಾರ್ಗದರ್ಶನ ಮತ್ತು ಸೌಲಭ್ಯಗಳನ್ನು ಮಹಾವಿದ್ಯಾಲಯದ ವತಿಯಿಂದ ಸದಾ ಕಲ್ಪಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.

ಉಪನ್ಯಾಸಕ ಪಿ. ಆರ್. ಮನಗೂಳಿ ಅವರು ಕಾರ್ಯಕ್ರಮವನ್ನು ನಿರೂಪಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಆರ್. ಎ. ಮರೆಪ್ಪನವರ್, ಶ್ರೀಮತಿ ಎಂ. ಪಿ. ಚಿಟ್ಟಿಸ್, ಸುರೇಶ್ ಪಾಟೀಲ್, ಎಂ. ಆರ್. ಗುಗ್ಗರಿ, ಎಲ್. ಜಿ. ತೋಟಗಿ, ಎಸ್. ಎಸ್. ಶಿಂಧೆ, ಎಸ್. ಆರ್. ಬಿರಂಗಿ, ಎಚ್. ಎಂ. ನಾಗರಾಳೆ, ಎಸ್. ಎ. ಶಿರಗಾಂವೆ, ಡಿ. ಸಿ. ಕಶೆಟ್ಟಿ, ಎಂ. ಬಿ. ಮುಸಾಯಿ ಹಾಗೂ ಸಿಬ್ಬಂದಿಗಳಾದ ಎಸ್. ಎ. ಬೋಸಲೆ, ರವಿ ಕುಲಕರ್ಣಿ, ದೀಪಕ್ ವಂಜೇರಿ ಸೇರಿದಂತೆ ಮಹಾವಿದ್ಯಾಲಯದ ಸಮಸ್ತ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು, ನೂತನ ಅಗ್ನಿವೀರನಿಗೆ ಶುಭ ಹಾರೈಸಿದರು.

Tags:

error: Content is protected !!