ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ತಾಂತ್ರಿಕ ಶಿಕ್ಷಣ ನೀಡುವ ಉದ್ದೇಶದಿಂದ ಎ ಜಿ ಎಂ ಇಂಜಿನಿಯರಿಂಗ್ ಮಹಾವಿದ್ಯಾಲಯವನ್ನು ಆರಂಭಿಸಲಾಗಿದೆ. ಇಲ್ಲಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ರಾಷ್ಟ್ರಸಂತ ಆಚಾರ್ಯ ಶ್ರೀ ಗುಣಧರ ನಂದಿ ಮಹಾರಾಜರು ಕರೆ ನೀಡಿದರು.


ಚಿಕ್ಕೋಡಿ ತಾಲೂಕಿನ ನೇಜ ಕ್ರಾಸ್-ಶಮನೇವಾಡಿ ಬಳಿಯ ಎಜಿಎಂ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಪ್ರಸಕ್ತ ಸಾಲಿನಿಂದ ಸಿವಿಲ್, ಇಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಶನ್, ಕಂಪ್ಯೂಟರ್ ಸೈನ್ಸ್ ಹಾಗೂ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮೆಷಿನ್ ಲರ್ನಿಂಗ್ ಶಾಖೆಗಳಲ್ಲಿ ಬಿ.ಇ ಪದವಿ ಕೋರ್ಸ್ಗಳು ಆರಂಭವಾಗಿದ್ದು, ಪ್ರವೇಶ ಪ್ರಕ್ರಿಯೆ ಚಾಲ್ತಿಯಲ್ಲಿದೆ.
ಸುಸಜ್ಜಿತ ಹಾಗೂ ಅತ್ಯಾಧುನಿಕ ಕಟ್ಟಡ, ಪರಿಣಿತ ಹಾಗೂ 6 ಪಿಎಚ್.ಡಿ ಪದವೀಧರ ಪ್ರೊಫೆಸರ್ಗಳನ್ನೊಳಗೊಂಡ ಬೋಧಕ ಸಿಬ್ಬಂದಿ, ಉಚಿತ ಬಸ್ ಸೌಕರ್ಯ, ಮತ್ತು ವೈಯಕ್ತಿಕ ಮೆಂಟರ್ಶಿಪ್ ವ್ಯವಸ್ಥೆ ಇದೆ.ವಿದ್ಯಾರ್ಥಿಗಳ ಉದ್ಯೋಗಕ್ಕಾಗಿ ಈಗಾಗಲೇ ಪ್ರಮುಖ ಬಹುರಾಷ್ಟ್ರೀಯ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಉತ್ತಮ ಪ್ಲೇಸ್ಮೆಂಟ್ ತರಬೇತಿ ನೀಡಲಾಗುತ್ತದೆ.
ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಧೇಯದೊಂದಿಗೆ ‘ಎಸ್ಡಿಎಂ ಜೈನ್ ಮಠ್ ಟ್ರಸ್ಟ್’ ಸ್ಥಾಪಿಸಲಾಗಿದ್ದು, ಸದ್ಯ ವರೂರು-ಹುಬ್ಬಳ್ಳಿ, ಜಮಖಂಡಿ, ಶಮನೇವಾಡಿ, ಬಸ್ತವಾಡದಲ್ಲಿ ಎಜಿಎಂ ಸಂಸ್ಥೆಯಡಿ 15 ಶೈಕ್ಷಣಿಕ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಶ್ರೀಗಳು ತಿಳಿಸಿದರು.
ಮುಂದಿನ ವರ್ಷದಿಂದ ಇದೇ ಕ್ಯಾಂಪಸ್ನಲ್ಲಿ ಬಿಬಿಎ, ಬಿಸಿಎ, ಬಿಎಂಎಸ್ ಹಾಗೂ ಡಿಪ್ಲೊಮಾ ಕೋರ್ಸ್ಗಳನ್ನು ಆರಂಭಿಸಲಾಗುವುದು. ಹಾಗೆಯೇ ಮುಂಬರುವ ದಿನಗಳಲ್ಲಿ ಎಂಬಿಬಿಎಸ್ ವೈದ್ಯಕೀಯ ಶಿಕ್ಷಣವನ್ನೂ ತರಲಾಗುವುದು ಎಂದು ಶ್ರೀಗಳು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ನಿರ್ದೇಶಕಿ ಭಾಗ್ಯಶ್ರೀ ಅಲಗೂರೆ, ಪ್ರಾಂಶುಪಾಲ ಡಾ. ಆರ್. ಕೆ. ಪಾಟೀಲ, ಉಪಪ್ರಾಂಶುಪಾಲ ಡಾ. ಬಿ. ಜೆ. ಪಾಟೀಲ, ಡಾ. ಸಂಜಯ ಅಂಕಲಿ, ಡಾ. ಸಚಿನ್ ಮೇಕ್ಕಳಕಿ, ಡಾ. ಶಾಂತಭೂಷಣ ಬಿ. ಎಂ. ಡಾ. ಶಶಿಕಾಂತ ವಾಳಕೆ ಸೇರಿದಂತೆ ಕಾಲೇಜಿನ ಪ್ರಾಧ್ಯಾಪಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
