ಚನ್ನಮ್ಮನ ಕಿತ್ತೂರು: ಬೇಸಿಗೆಯಲ್ಲಿ ಮೈಗೆ ಮೆತ್ತುವ ದೂಳು, ಮಳೆಗಾಲದಲ್ಲಿ ನೋಡಿದರೆ ಕೆಸರು. ಚನ್ನಮ್ಮನ ಕಿತ್ತೂರು ತಾಲ್ಲೂಕಿನ ತಿಗಡೊಳ್ಳಿ ಗ್ರಾಮಕ್ಕೆ ತೆರಳುವ ಮುಖ್ಯ ರಸ್ತೆಯಲ್ಲಿ ಬರುವ ಹಿರೇಮಡ್ಡಿ ಬಳಿಯ ರಸ್ತೆಯ ದುಃಸ್ಥಿತಿಯಿದು.ಹಿರೇಮಡ್ಡಿ ಬಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದೆ. ಗುತ್ತಿಗೆದಾರನ ಅಚಾತುರ್ಯದಿಂದ ಉಚಿತವಾಗಿ ನೀಡಿರುವ ಕೆಸರು ಭಾಗ್ಯವಿದು ಎಂದು ಈ ರಸ್ತೆಯ ಮೂಲಕ ಸಂಚರಿಸುವ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.


ಬೇಸಿಗೆಯಲ್ಲಿ ಮೈ ದೂಳು ಕೊಡವಿಕೊಂಡು ಸಂಚರಿಸಿದ್ದುಂಟು. ಈಗ ಮಳೆಗಾಲದ ಕೆಸರಿನಲ್ಲಿ ಬೈಕ್ ಸ್ಕಿಡ್ ಆಗಿ ಬಿದ್ದು ರಾಡಿ ಮೆತ್ತಿಸಿಕೊಂಡು ಅನೇಕರು ಮನೆಗೆ ಹೋಗುತ್ತಿದ್ದಾರೆ.ಆದರೆ, ಏನ್ಮಾಡೋದು..ಬಡವನ ಸಿಟ್ಟು ದವಡೆಗೆ ಮೂಲ ಎನ್ನುವಂತಾಗಿದೆ ಅವರ ಪರಿಸ್ಥಿತಿ ಎಂದು ಈ ದೃಶ್ಯ ಗಮನಿಸಿದವರು ಹೇಳುತ್ತಾರೆ.ತಾಲ್ಲೂಕು ಕೇಂದ್ರಸ್ಥಾನವಾಗಿರುವ ಚನ್ನಮ್ಮನ ಕಿತ್ತೂರಿಗೆ ಹೆಚ್ಚು ಜನರು ಬೈಕ್ ಮೇಲೆಯೇ ಸಂಚರಿಸುತ್ತಾರೆ. ‘ಹಿರೇಮಡ್ಡಿ ಬಳಿ ಸ್ವಲ್ಪ ಹುಷಾರಾಗಿ ಹೋಗು. ಬಿದ್ದು ಶರ್ಟ್, ಪ್ಯಾಂಟ್ ಕೆಸರು ಮಾಡಿಕೊಂಡು ಬರಬೇಡ’ ಎಂದು ಯುವಕರಿಗೆ ಸಲಹೆ ನೀಡಿ, ಹಾರೈಸಿ ನಿತ್ಯ ಬೀಳ್ಕೊಡುವ ಪರಿಪಾಠವನ್ನು ಮಳೆಗಾಲ ಆರಂಭವಾದಾಗಿನಿಂದ ಇಲ್ಲಿನ ಹಿರಿಯರು ಬೆಳೆಸಿಕೊಂಡಿದ್ದಾರೆ. ಹಿರಿಯರ ಹಾರೈಕೆ ಕೆಲವು ಸಾರಿ ಫಲಿಸದೆ ಹೋಗಿದೆ. ಅನೇಕ ಯುವಕರ ಬೈಕ್ ಸ್ಕಿಡ್ ಆಗಿಸಿ ನೆಲಕ್ಕೆ ಮಲಗಿದ್ದಿದೆ. ಬಟ್ಟೆಯನ್ನು ರಾಡಿಮಯವಾಗಿಸಿಕೊಂಡು ಮನೆಗೆ ಮರಳಿದ್ದಿದೆ. ಜಾರುರಸ್ತೆಯಂದಾಗಿದೆ ಅಲ್ಲಿನ ದಾರಿ ಎಂದು ಗ್ರಾಮಸ್ಥರು ದೂರುತ್ತಾರೆ. ಬೇಸಿಗೆಯಲ್ಲಿ ದೂಳಿನ ಸಮಸ್ಯೆಯನ್ನು ಎದುರಿಸಿದೆವು. ಈಗ ನೋಡಿದರೆ ಕೆಸರಿನ ಸಮಸ್ಯೆಯನ್ನು ಎದುರಿಸುವಂತಾಗಿದೆ ಎಂದು ಪರಿತಪಿಸುತ್ತಿದ್ದಾರೆ ಗ್ರಾಮಸ್ಥರು.
