ಹೈಕಮಾಂಡ್ ತೀರ್ಮಾನದಂತೆ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿ ಹಾಗೂ ನಾನು ಉಪಮುಖ್ಯಮಂತ್ರಿಯಾಗಿ ಮುಂದಿನ ಎರಡು ವರ್ಷ ಜವಾಬ್ದಾರಿಯುತ ಸರ್ಕಾರ ನಡೆಸಲಿದ್ದೇವೆ ಎಂದು ಬೆಳಗಾವಿಯಲ್ಲಿ ಡಿಸಿಎಂ ಜಿ. ಪರಮೇಶ್ವರ್ ಹೇಳಿದ್ದಾರೆ. ಪ್ರಣಾಳಿಕೆಯ 592 ಭರವಸೆಗಳನ್ನು ಈಡೇರಿಸಲು ಹಾಗೂ ನೀರಾವರಿ ಯೋಜನೆಗಳ ಜಾರಿಗೆ ನಮ್ಮ ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕಳೆದ ಬಾರಿ ಗೃಹ ಸಚಿವರಾಗಿ, ಈ ಬಾರಿ ಡಿಸಿಎಂ ಆಗಿ ಬೆಳಗಾವಿಗೆ ಆಗಮಿಸಿದ್ದು, ಮುಂದಿನ ಬಾರಿ ಮುಖ್ಯಮಂತ್ರಿಯಾಗಿ ಬರಲಿದ್ದಾರಾ ಎಂಬ ಪ್ರಶ್ನೆಗೆ ಹೈಕಮಾಂಡ್ ತೀರ್ಮಾನದಂತೆ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಹಾಗೂ ತಾವು ಉಪಮುಖ್ಯಮಂತ್ರಿಯಾಗಿ ಮುಂಬರುವ ಎರಡು ವರ್ಷಗಳ ಕಾಲ ಜವಾಬ್ದಾರಿಯುತವಾಗಿ ಜನಪರ ಆಡಳಿತ ನೀಡಲಿದ್ದೇವೆ. ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಲಾದ ಎಲ್ಲಾ 592 ಭರವಸೆಗಳನ್ನು ಈಡೇರಿಸಲು ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ಬದ್ಧವಾಗಿದೆ ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ತಿಳಿಸಿದ್ದಾರೆ. ಭರವಸೆಗಳನ್ನು ಅಲ್ಪಾವಧಿ ಮತ್ತು ದೀರ್ಘಾವಧಿ ಎಂದು ವಿಂಗಡಿಸಲಾಗಿದ್ದು, ಈಗಾಗಲೇ ಬಹುತೇಕ ಅಲ್ಪಾವಧಿ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕ ಭಾಗದ ನೀರಾವರಿ ಹಾಗೂ ಕೈಗಾರಿಕಾ ಯೋಜನೆಗಳ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಡಿಸಿಎಂ ಸ್ಪಷ್ಟಪಡಿಸಿದರು. ರಾಜ್ಯದಲ್ಲಿ ನೀರಾವರಿ ಪ್ರದೇಶ ಹೆಚ್ಚಾದರೆ ಆರ್ಥಿಕತೆ ತಾನಾಗಿಯೇ ಸುಧಾರಿಸುತ್ತದೆ ಎಂದ ಅವರು, ಕೈಗಾರಿಕೆಗಳ ಸ್ಥಾಪನೆಗೆ ಮುಂದೆ ಬರುವ ಉದ್ಯಮಿಗಳಿಗೆ ತೆರಿಗೆ ವಿನಾಯಿತಿ, ಆದ್ಯತೆಯ ಮೇರೆಗೆ ಭೂಸ್ವಾಧೀನ ಹಾಗೂ ನೀರಿನ ಸೌಕರ್ಯ ಸೇರಿದಂತೆ ಸರ್ಕಾರದಿಂದ ಸಿಗಬೇಕಾದ ಎಲ್ಲಾ ರೀತಿಯ ನೆರವು ಮತ್ತು ಪ್ರೋತ್ಸಾಹ ನೀಡಲು ಸರ್ಕಾರ ಸದಾ ಸಿದ್ಧವಿದೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಇದೇ ವೇಳೆ ಗೃಹಜ್ಯೋತಿ ಯೋಜನೆಗೆ ಜಾತಿ ಪ್ರಮಾಣಪತ್ರ ಕೇಳುತ್ತಿರುವ ಕುರಿತು ತಮಗೆ ಮಾಹಿತಿ ಇಲ್ಲವೆಂದ ಅವರು, ಹಳೆಯ ನಿಯಮದಂತೆಯೇ ಪ್ರಕ್ರಿಯೆ ಮುಂದುವರೆಯಲಿದೆ ಎಂದರು. ಇನ್ನು ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆಗೆ ಕಾಂಗ್ರೆಸ್ ಶಾಸಕರ ವಿರೋಧದ ಕುರಿತು ಪ್ರತಿಕ್ರಿಯಿಸಿ, “ಇದು ಕ್ಯಾಬಿನೆಟ್ ಪಡೆದ ಸರ್ಕಾರದ ತೀರ್ಮಾನವಾಗಿದ್ದು, ಈಗಾಗಲೇ ಅರ್ಧದಷ್ಟು ಕೆಲಸ ಮುಗಿದಿದೆ. ವಿರೋಧ ವ್ಯಕ್ತಪಡಿಸುತ್ತಿರುವವರನ್ನು ಕರೆದು ಮನವೊಲಿಸಿ, ಬಾಕಿ ಉಳಿದಿರುವ ಕಾಮಗಾರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತೇವೆ” ಎಂದು ತಿಳಿಸಿದರು.
